ಬೆಂಗಳೂರು: ರಾಜ್ಯಕ್ಕೆ ಸಿಹಿ ಸುದ್ದಿ ನೀಡಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್!
ರಾಜ್ಯದ ಪಾಲಿಗೆ ಬರುವ ಜಿಎಸ್ಟಿ ಪರಿಹಾರದ ಹಣ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಇತ್ತೀಚೆಗೆ ಮಂಡಿಸಿದ್ದ ಕೇಂದ್ರ ಮುಂಗಡ ಪತ್ರ ಕುರಿತು ಮಾತನಾಡಿ, ಜಿಎಸ್ಟಿ ತೆರಿಗೆ ನಷ್ಟ ಪರಿಹಾರ ಕೊಡುವ ಭರವಸೆ ನೀಡಿದರು.
ಕಳೆದ ವರ್ಷ ಕೇಂದ್ರದ ಬಳಿ ಜಿಎಸ್ಟಿ ತೆರಿಗೆ ಬಾಕಿ ಕೊಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷದ ಅಂತ್ಯಕ್ಕೆ ಎರಡು ತಿಂಗಳ ಜಿಎಸ್ಟಿ ತೆರಿಗೆ ಬಾಕಿ ಇತ್ತು. ಆ ಜಿಎಸ್ಟಿ ತೆರಿಗೆ ಪರಿಹಾರವನ್ನು ಕಳೆದ ಡಿಸೆಂಬರ್ ವೇಳೆಯಲ್ಲಿ ರಾಜ್ಯಕ್ಕೆ ನೀಡಲಾಗಿತ್ತು. ಕೊನೆಯ ತ್ರೈಮಾಸಿಕದ ಬಾಕಿಯನ್ನೂ ಶೀಘ್ರದಲ್ಲೇ ನೀಡಲಾಗುತ್ತದೆ. ಜಿಎಸ್ಟಿ ತೆರಿಗೆ ಬಾಕಿ ಕರ್ನಾಟಕದ ಒಂದೇ ಸಮಸ್ಯೆ ಅಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಜಿಎಸ್ಟಿ ತೆರಿಗೆ ನಷ್ಟ ಪರಿಹಾರ ಕೇಂದ್ರದಿಂದ ಬಾಕಿ ಕೊಡಬೇಕಿದೆ ಎಂದು ಅವರು ತಿಳಿಸಿದರು.
ಮನ್ರೇಗಾ ಯೋಜನೆಯಲ್ಲಿ ರಾಜ್ಯದ ವೇತನ ಬಾಬ್ತು ಬಾಕಿ ಯಾವುದೂ ಇಲ್ಲ. 14ನೇ ಹಣಕಾಸು ಆಯೋಗದ ಅನುದಾನವೂ ಸೇರಿದಂತೆ ಇಲ್ಲಿಯವರೆಗೆ ರಾಜ್ಯಕ್ಕೆ 2.03 ಲಕ್ಷ ಕೋಟಿ ರೂ. ನಾನಾ ಅನುದಾನಗಳು ನೀಡಲಾಗಿದೆ ಎಂಸು ನಿರ್ಮಾಲಾ ಇದೇ ಸಂದರ್ಭ ತಿಳಿಸಿದ್ದಾರೆ.