ಹೊಸ ದಿಗಂತ ವರದಿ, ಪಾಂಡವಪುರ:
ಶಿವಮೊಗ್ಗದಲ್ಲಿ ಜಿಲೆಟಿನ್ ಕಡ್ಡಿ ತುಂಬಿದ್ದ ಲಾರಿ ಸ್ಫೋಟ ಹಾಗೂ ಪತ್ರಿಕೆಯಲ್ಲಿ ವರದಿಯಾದ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ತಾಲೂಕಿನ ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಾಲೂಕಿನ ಬೇಬಿ ಬೆಟ್ಟದ ಹಲವು ಗಣಿ ಸ್ಥಳಗಳಿಗೆ ತೆರಳಿ ಸ್ಫೋಟಕ ವಸ್ತುಗಳ ಸಂಗ್ರಹ ಕುರಿತು ಪರಿಶೀಲನೆ ನಡೆಸಿದರು.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ತೆರಳಿದ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಎಲ್ಲೆಲ್ಲಿ ಸ್ಫೋಟಕಗಳನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದಾರೆಂಬುದರ ಬಗ್ಗೆ ಪರಿಶೀಲನೆ ನಡೆಸಿದರೇ ವಿನಃ ಅದರ ಗುಟ್ಟನ್ನು ಬಿಟ್ಟುಕೊಡಲಿಲ್ಲ.
ಬೇಬಿ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ದೂರಿನ ಮೇರೆಗೆ ದಿಢೀರ್ ದಾಳಿ ನಡೆಸಿರುವುದಾಗಿ ಹೇಳಿ ಜಾರಿಕೊಂಡರು. 2018ರ ಸೆ.25ರಂದು ಬೇಬಿ ಬೆಟ್ಟದಲ್ಲಿ ಭೀಕರ ಸ್ಫೋಟ ಶಬ್ಧ ಕೇಳಿಬಂದಿತ್ತು. ಕೆಆರ್ಎಸ್ ಅಣೆಕಟ್ಟೆಯಿಂದ ರೇಡಿಯಲ್ ಡಿಸ್ಟೆನ್ಸ್ ಪ್ರಕಾರ ಕೇವಲ 8 ಕಿ.ಮೀ. ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಸ್ಪೋಟ ಶಬ್ಧ ಕೇಳಿಬಂದು ಭೂಕಂಪನದ ಅನುಭವವಾಗಿತ್ತು. ಭೂಕಂಪನದ ಅಲೆಗಳು ಹಾದುಹೋಗಿದ್ದ ಮಾರ್ಗ, ಸ್ಪೋಟ ಸಂಭವಿಸಿದ ಸ್ಥಳ, ಅಣೆಕಟ್ಟೆಗೂ ಸ್ಪೋಟ ಸಂಭವಿಸಿದ ಸ್ಥಳಕ್ಕೂ ಇರುವ ದೂರ, 6 ಸೆಕೆಂಡ್ಗಳ ಅಂತರದಲ್ಲಿ ಎರಡುಬಾರಿ ಗಣಿ ಸ್ಪೋಟ ಸಂಭವಿಸಿದ್ದನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿಖರವಾಗಿ ಗುರುತಿಸಿ ಸ್ಯಾಟಲೈಟ್ ಚಿತ್ರಗಳೊಂದಿಗೆ ವರದಿ ನೀಡಿತ್ತು.ಕೆಆರ್ಎಸ್ಗೆ ಗಣಿಗಾರಿಕೆಯಿಂದ ಕಂಟಕವಿರುವುದನ್ನು ಮೊಟ್ಟಮೊದಲಬಾರಿಗೆ ವೈಜ್ಞಾನಿಕವಾಗಿ ಸಾಬೀತುಪಡಿಸಿತ್ತು.