ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಶಿವಮೊಗ್ಗದ ಅಬ್ಬಲಗೆರೆ-ಹುಣಸೋಡು ಮಧ್ಯ ಇರುವ ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಿಸಿದ್ದು, 15ಕ್ಕೂ ಹೆಚ್ಚು ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಲಾರಿಯಲ್ಲಿ ಕಲ್ಲು ಗಣಿಗಾರಿಕೆಗಾಗಿ ತಂದಿದ್ದ 50ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ಸ್ಫೋಟಿಸಿ, ಈ ಭೀಕರ ಅನಾಹುತ ಸಂಭವಿಸಿದೆ. ಮೃತರ ಗುರುತು ಸಿಗಲಾರದಷ್ಟು ಛಿದ್ರವಾಗಿದೆ. ಸ್ಥಳದಲ್ಲಿ ಯಾರೂ ಸಹ ಬದುಕುಳಿದಿಲ್ಲವೆಂದು ಅಂದಾಜಿಸಲಾಗಿದೆ.
ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಹರಸಾಹಸವನ್ನೇ ಮಾಡಬೇಕಾಗಿದೆ .ಸ್ಫೋಟದ ತೀವ್ರತೆಗೆ ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ಧೂಳು ಆವರಿಸಿದ್ದು ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಸಂಪಕ ಕಡಿತಗೊಂಡಿದೆ.
ಈ ದುರಂತಕ್ಕೆ ಯಾರು ಕಾರಣ ಎಂದು ಇನ್ನೂ ತಿಳಿದುಬಂದಿಲ್ಲ. ಒಟ್ಟಾರೆ ಯಾರ ನಿರ್ಲಕ್ಷ್ಯವೋ ಏನೋ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ. ದೂರದ ಊರಿನಿಂದ ತಮ್ಮ ಕುಟುಂಬಗಳನ್ನು ಉಳಿಸಲು ಬಂದು ದುಡಿಯುತ್ತಿದ್ದವರು ಇದೀಗ ಹೆಣವಾಗಿದ್ದಾರೆ. ಅವರನ್ನೇ ನಂಬಿಕೊಂಡಿದ್ದ ಕುಟುಂಬಗಳು ಬೀದಿಗೆ ಬಿದ್ದಿದೆ.