Monday, August 15, 2022

Latest Posts

ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಸರ್ಕಾರಿ ವೈದ್ಯರೊಂದಿಗೆ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್

ಚಿಕ್ಕಮಗಳೂರು: ಕೊರೋನಾ ಸೋಂಕಿತ ಮೂಡಿಗೆರೆಯ ಸರ್ಕಾರಿ ವೈದ್ಯರೊಂದಿಗೆ ಪ್ರಾಥಮಿಕ ಹಾಗೂ ಎರಡನೇ ಹಂತದಲ್ಲಿ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುವ ಕೆಲಸ ಈಗ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಳೆದೊಂದು ವಾರದಲ್ಲಿ ವೈದ್ಯರೊಂದಿಗೆ ಸಂಪರ್ಕಕ್ಕೆ ಬಂದವರ ಸಂಖ್ಯೆ ಸಾವಿರದ ಗಡಿ ಸಮೀಪಿಸುತ್ತದೆ. ಇದರಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದವರೇ ಸುಮಾರು 800 ಜನರಿದ್ದಾರೆ. ಜಿಲ್ಲಾಡಳಿತ ಈಗಾಗಲೇ 790 ಜನರನ್ನು ಗುರುತು ಮಾಡಿದೆ.
ಇವರೆಲ್ಲರಿಗೂ ಮೂಡಿಗೆರೆ ಪಟ್ಟಣ ಹಾಗೂ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ನಂದೀಪುರ ಗ್ರಾಮದ ಸುತ್ತಮುತ್ತಲಿನಿವರೇ ಹೆಚ್ಚಿದ್ದಾರೆ. ಇವರಲ್ಲದೆ ವೈದ್ಯರ ಸ್ನೇಹಿತರು, ಸಂಬಂಧಿಕರು ಹೀಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಜನರನ್ನು ಈಗ ಜಿಲ್ಲಾಡಳಿತ ಕ್ವಾರಂಟೈನ್‍ನಲ್ಲಿ ಇಡಬೇಕಿದೆ.
ಈ ಪೈಕಿ ಕೆಲವು ಸ್ಥಿತಿವಂತರು ತಮ್ಮ ತಮ್ಮ ಮನೆಗಳಲ್ಲೇ ಕ್ವಾರಂಟೈನ್‍ನಲ್ಲಿರಲು ಒಪ್ಪಿದ್ದಾರೆ. ಆ ರೀತಿಯ ಅನುಕೂಲಗಳಿಲ್ಲದವರನ್ನು ಅನಿವಾರ್ಯವಾಗಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲೆ ಇಡಬೇಕಾಗಿದೆ. ಆದರೆ ಅದಕ್ಕೆ ಅಗತ್ಯವಿರುವಷ್ಟು ಕೊಠಡಿಗಳು ಹಾಗೂ ಮೂಲ ಸೌಕರ್ಯಗಳ ಲಭ್ಯವಿಲ್ಲದಿರುವುದು ಜಿಲ್ಲಾಡಳಿತದ ಚಿಂತೆಗೆ ಕಾರಣವಾಗಿವೆ.
ಮೂಡಿಗೆರೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವು ವಿದ್ಯಾರ್ಥಿನಿಲಯಗಳನ್ನು ಕ್ವಾರಂಟೈನ್ ಸೆಂಟರ್ ಮಾಡಲು ನಿರ್ಧರಿಸಲಾಗಿದೆ ಆದರೆ ಅಲ್ಲಿ ಕ್ವಾರಂಟೈನ್‍ನಲ್ಲಿರಲು ಬಹುತೇಕರು ಒಪ್ಪುತ್ತಿಲ್ಲ. ಅಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಕೊಠಡಿಗಳಿರುವುದಿಲ್ಲ. ಅಂತರ ಕಾಯ್ದುಕೊಳ್ಳಲು ಆಗುವುದಿಲ್ಲ. ಕೊರೊನಾ ಇಲ್ಲದವರಿಗೂ ಸೋಂಕು ತಗುಲಿದರೆ ಏನು ಮಾಡುವುದು ಎಂನ್ನುವ ಪ್ರಶ್ನೆ ಮುಂದಿಡುತ್ತಿದ್ದಾರೆ.
ಈ ವಿಚಾರದಲ್ಲಿ ಶ್ರೀಮಂತರಿಗೆ ಒಂದು ರೀತಿ ನಮಗೊಂದು ರೀತಿ ನಡೆಸಿಕೊಳ್ಳುವುದು ಬೇಡ, ನಮಗೂ ಹೌಸ್ ಕ್ವಾರಂಟೈನ್‍ನಲ್ಲೇ ಇರಲು ಅವಕಾಶಕೊಡಿ ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಅವಕಾಶಕೊಟ್ಟರೆ ಸರ್ಕಾರದ ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿದಂತಾಗುತ್ತದೆ ಈ ಕಾರಣಕ್ಕೆ ಜಿಲ್ಲಾಡಳಿತ ಈಗ ಜಿಜ್ಞಾಸೆಗೆ ಸಿಕ್ಕಿಕೊಂಡಿದೆ.
ಸಂಸದೆ ಸಭೆ
ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಗುರುವಾರ ಮೂಡಿಗೆರೆಗೆ ಭೇಟಿಕೊಟ್ಟು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವೈದ್ಯರನ್ನು ಸಂಪರ್ಕಿಸಿದ್ದ ಸುಮಾರು 800 ಜನರನ್ನು ಗುರುತಿಸಿ ಎಲ್ಲರನ್ನೂ ಕ್ವಾರಂಟೈನ್‍ಗೆ ಒಳಪಡಿಸಬೇಕಾಗಿದೆ ಆದರೆ ಮೂಡಿಗೆರೆಯಲ್ಲಿ ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿಡಲು ಕಷ್ಟವಾಗಿದೆ. ಅದರಿಂದ ವಿನಾಯಿತಿ ನೀಡಿ ಹೋಂ ಕ್ವಾರಂಟೈನ್‍ನಲ್ಲಿಡಲು ಅವಕಾಶ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿಡಲು ಕಷ್ಟವಾಗಿದ್ದು ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿದ್ದು, ಹೋಂ ಕ್ವಾರಂಟೈನ್‍ನಲ್ಲಿಡಲು ಅನುಮತಿ ದೊರೆತಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ ವಿಶಿಷ್ಟ ಪ್ರಕರಣವಿದು, 2 ಜಿಲ್ಲೆಗಳ ಸಂಪರ್ಕವಿದ್ದು, 900ಕ್ಕೂ ಹೆಚ್ಚು ಜನ ವೈದ್ಯರೊಂರನ್ನು ಸಂಪರ್ಕಿಸಿದ್ದಾರೆ. ಈಗಾಗಲೇ 435 ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗಿದೆ. ಹಾಸನ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದು, ಅಲ್ಲಿರುವವರ ಮಾದರಿ ಪಡೆಯುವಂತೆ ಕೋರಿದ್ದೇವೆ. ಸೋಂಕಿತ ವೈದ್ಯರು ಆರೋಗ್ಯವಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನಿಡುವ ವೇಳೆ ಅವರಿಗೆ ಕೊರೋನಾ ಸೋಂಕು ತಗುಲಿರಬಹುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss