ಗದಗ: ಜಿಲ್ಲೆಯಲ್ಲಿ ಆವರಿಸಿಕೊಂಡಿರುವ ಕೊರೋನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು ಬದಿಗೆ ತಳ್ಳಿ ತಮ್ಮ ಪತ್ನಿಯನ್ನು ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ.
ಜಿಲ್ಲೆಗೆ ಹೊಸದಾಗಿ ಜಿಲ್ಲಾಧಿಕಾರಿಯಾಗಿ ಬಂದಿರುವ ಎಂ ಸುಂದರೇಶಬಾಬು ಅವರು ತಮ್ಮ ಪತ್ನಿ ಶಿವಶಂಕರಿಯವರಿಗೆ ನಗರದ ಕೆಸಿ ರಾಣಿ ರಸ್ತೆಯಲ್ಲಿ ಇರುವ ದಂಡಪ್ಪ ಮಾನ್ವಿ ಮಕ್ಕಳ ಮತ್ತು ಮಹಿಳಾ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಮೂಲಕ ಸರಿಕಾರಿ ಆಸ್ಪತ್ರೆಗಳಲ್ಲಿಯೂ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ.
ಭಾನುವಾರ ಬೆಳಿಗ್ಗೆ 5.30 ಗಂಟೆಗೆ ಶಸ್ತ್ರಚಿಕಿತ್ಸೆ ಮೂಲಕ ಅವರ ಪತ್ನಿಗೆ ಹೆರಿಗೆಯಾಗಿದೆ. ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯದಿಂದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಮೊದಲು ಎರಡು ಮೂರು ತಿಂಗಳಿಂದ ತಪಾಸಣೆಯನ್ನೂ ಸಹ ಇಲ್ಲಿಯೇ ಮಾಡಿಸಿದ್ದಾರೆ. ಅವರಿಗೆ ಡಾ. ಜಯಶ್ರೀ, ಡಾ. ಶೃತಿ ಎಂಬ ವೈದ್ಯರು ತಪಾಸಣೆ ಮಾಡಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಿಗಿನ ಜಾವ ಸಿಜರಿನ್ ಮಾಡಲಾಗಿದೆ. ಈ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರಿಗೌಡರ ಅವರು ಮಾತನಾಡಿ, ನಮ್ಮ ವೈದ್ಯರ ಮೇಲೆ ನಂಬಿಕೆ ಇಟ್ಟು ಸರಕಾರಿ ಆಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿದ್ದಾರೆ. ಜಿಲ್ಲಾಧಿಕಾರಿಯವರ ನಡೆ ನಮ್ಮ ಜಿಲ್ಲೆಯ ಜನರಿಗೆ ಮಾದರಿಯಾಗಿದೆ ಎಂದು ಹೇಳಿದರು.