Thursday, August 11, 2022

Latest Posts

ಜಿಲ್ಲಾಧಿಕಾರಿ ಸಿ.ಸತ್ಯಭಾಮರಿಂದ ದಿಢೀರ್ ಕೋಲಾರ ನಗರ ಸಂಚಾರ

ಹೊಸ ದಿಗಂತ ವರದಿ, ಕೋಲಾರ:

ಜಿಲ್ಲಾಧಿಕಾರಿ ಸಿ.ಸತ್ಯಭಾಮ ಶನಿವಾರ ಬೆಳಗ್ಗೆ ದಿಢೀರ್ ನಗರ ಸಂಚಾರ ನಡೆಸಿ, ರಸ್ತೆ ಬದಿಯಲ್ಲಿ ಕಸದ ರಾಶಿಗಳು, ಪಾದಚಾರಿ ರಸ್ತೆಗಳ ಒತ್ತುವರಿ ಮಾಡಿರುವುದು ಕಂಡು ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆಸಿ ತೀವ್ರವಾಗಿ ತರಾಟೆಗೆ ತೆಗೆದು ಕೊಂಡರು.
ಡಿಸಿಯವರು ನಗರದ ಅಮ್ಮವಾರಿ ಪೇಟೆ ವೃತ್ತದಿಂದ ಕಾಳಮ್ಮ ಗುಡಿ ರಸ್ತೆ, ಕೆ.ಎಸ್.ಆರ್.ಟಿ.  ಬಸ್ ನಿಲ್ದಾಣ, ಅಂತಗಂಗೆ ರಸ್ತೆ, ಕಾರಂಜಿ ಕಟ್ಟೆ ರಸ್ತೆ ಮಾರ್ಗ, ಬಸ್ ನಿಲ್ದಾಣದ ಹಿಂಭಾಗದ ರಸ್ತೆ, ಸುತ್ತಮುತ್ತ ಪ್ರದೇಶಗಳನ್ನು ಬೆಳಿಗ್ಗೆ ೬ ಗಂಟೆಯಿಂದ ೯ ಗಂಟೆಯವರೆಗೆ  ಸಂಚರಿಸಿ  ಅವ್ಯವಸ್ಥೆಗಳನ್ನು  ಕಂಡು ಕೆಂಡ ಮಂಡಲವಾದರು.
ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿನ ವಿನಾಯಕ,ರೀಗಲ್, ಗಿರೀಶ್ ಸೇರಿದಂತೆ  ಕೆಲವು ವೈನ್ಸ್ ಶಾಪ್‌ಗಳು ಬೆಳಗ್ಗೆಯೇ ಬಾಗಿಲು ತೆರೆದು ವಹಿವಾಟು ನಡೆಸುತ್ತಿದ್ದಾರೆ ನೀವು ಬರುತ್ತಿರುವ ಮಾಹಿತಿ ತಿಳಿದು ಈಗ ಬಾಗಿಲು ಹಾಕಿದ್ದಾರೆ ಎಂದು ನಗರಸಭೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ದೂರಿದರು.
ಈ ದೂರಿನ ಮೇರೆಗೆ ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿ ಪರವಾನಗಿ ರದ್ದುಗೊಳಿಸಲು ಶಿಫಾರಸ್ಸು ಮಾಡಿ ಎಂದು ಅಧಿಕಾರಿಗಳಿಗೆ ಡಿಸಿಯವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ದ್ವಿಚಕ್ರವಾಹನದಲ್ಲಿ ಮಾಸ್ಕ ಧರಿಸದೆ ಬಂದ ಯುವಕನನ್ನು ಏಕೆ ಮಾಸ್ಕ್ ಹಾಕಿಲ್ಲ ಎಂದು ಡಿಸಿ ಪ್ರಶ್ನಿಸಿದಾಗ ಆತ ಉದ್ದಟತನದಿಂದ ಮಾತನಾಡಿದ ಹಿನ್ನಲೆಯಲ್ಲಿ  ಪೊಲೀಸರ ಬಳಿಯಿಂದ ಲಾಠಿ ಪಡೆದು ಯುವಕನಿಕಗೆ ಎರಡು ಬಾರಿಸಿ ೫೦೦ ದಂಡ ವಿಧಿಸಿದರು
ನಗರಸಭೆಗೆ ಸೇರಿದ ಸರ್ವೆ ಸಂಖ್ಯೆ ೧೮೧ ಜಾಗದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ನಗರದಲ್ಲಿರುವ ನಗರಸಭೆಯ ಎಲ್ಲಾ ಆಸ್ತಿಗಳಿಗೆ ಫೆನ್ಸಿಂಗ್ ಹಾಕಿಸಿ ಫಲಕಗಳನ್ನು ಆಳವಡಿಸಿ ಎಂದು ಪೌರಾಯುಕ್ತರಿಗೆ ಸೂಚಿಸಿದರು.
ಅಕ್ರಮ ಗೋವಧೆ ಕೇಸ್ ದಾಖಲಿಸಿ
ನಗರದ ಕೆಲವು ಕಡೆ  ಅಕ್ರಮವಾಗಿ ಗೋವಧೆ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಂಡು ಅಂತಹವರ ವಿರುದ್ದ ಪ್ರಕರಣ ದಾಖಲು ಮಾಡಿ, ತ್ಯಾಜ್ಯಗಳನ್ನು ರಸ್ತೆಗಳಲ್ಲಿ ಎಸೆದರೆ ಪ್ರಕರಣ ದಾಖಲಿಸಿ ಎಂದು ಸೂಚಿಸಿದರು.
ನಗರಸಭೆಯ ಅಧಿಕಾರಿಗಳು, ಪರಿಸರ ಇಲಾಖೆಯ ಅಧಿಕಾರಿಗಳು  ಮಾಡಬೇಕಾದ ಕೆಲಸಗಳನ್ನು ನಾನು ಮಾಡಬೇಕಾಗಿ ಬಂದಿದೆ. ಇನ್ನು ಮುಂದೆ ನಗರದ ಪ್ರತಿ ವಾರ್ಡ್‌ಳಿಗೂ ಅನಿರೀಕ್ಷಿತವಾಗಿ ಭೇಟಿ ನೀಡುತ್ತೇನೆ ಎಂದರು.
ಅನಿರೀಕ್ಷಿತ ಭೇಟಿಯಿಂದ ಆಡಳಿತದಲ್ಲಿ ಚುರುಕು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಡಿಸಿಯವರ ಜತೆ ನಗರ ಸಂಚಾರದಲ್ಲಿ ಪಾಲ್ಗೊಂಡು, ಡಿಸಿಯವರ ಅನಿರೀಕ್ಷಿತ ಭೇಟಿಯಿಂದ ಆಡಳಿತದಲ್ಲಿ ಚುರುಕು ಮೂಡಲಿದ್ದು, ಅಧಿಕಾರಿಗಳ ಚಳಿ ಬಿಡಲಿದೆ ಎಂದರು.
ಇದೇ ಸಂದರ್ಭದಲ್ಲಿ ರಸ್ತೆ ಬದಿ ಕಸದ ರಾಶಿಗಳನ್ನು ತೆರವುಗೊಳಿಸಬೇಕು, ಕುಂಟುತ್ತಾ ಸಾಗಿರುವ ನಗರದ ರಸ್ತೆ ಕಾಮಗಾರಿಗಳನ್ನು ಶೀಘ್ರ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲು ಮನವಿ ಮಾಡಿದರು.
ಸಂಬಂಧ ಪಟ್ಟ ವಾರ್ಡಿನ ಸದಸ್ಯರು ಸಹ ತಮ್ಮ ವಾರ್ಡ್ ಸ್ವಚ್ಚವಾಗಿಟ್ಟು ಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಇರುತ್ತದೆ. ಆಯಾ ವಾರ್ಡಿನ ನಗರಸಭೆ ಮೇಸ್ತ್ರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಅರೋಗ್ಯ ನಿರೀಕ್ಷಕಕಿ ದೀಪ ಅವರಿಗೆ ಸೂಚಿಸಿದರು.
ಕೀಲು ಕೋಟೆ ಅಂಜನೇಯ ಸ್ವಾಮಿ ದೇವಾಲಯವನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ದೇವಾಲಯದ ಕಾಪೌಂಡ್ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ. ಮುನಿರಾಜು, ನಗರಸಭಾ ಸದಸ್ಯರಾದ ಜವರಿಲಾಲ್, ಮಂಜುನಾಥ್, ನಗರಸಭೆ ವ್ಯವಸ್ಥಾಪಕ ತ್ಯಾಗರಾಜ್,ಸಿಬ್ಬಂದಿ ನಾಗರಾಜ್  ಮುಂತಾದವರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss