ಉಡುಪಿ: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ಶಿಕ್ಷಕರಿಗೆ ಗೌರವ, ಕೃತಜ್ಞತೆ ಸಲ್ಲಿಸುವ ಅವಕಾಶವಾದ ಶಿಕ್ಷಕರ ದಿನಾಚರಣೆಯ ಮೇಲೆ ತನ್ನ ಕರಿಛಾಯೆ ಬೀರಿದೆ. ಈ ಬಾರಿ ಶಿಕ್ಷಕರ ದಿನಾಚರಣೆಯನ್ನು ಸೀಮಿತ ಜನರೊಂದಿಗೆ ಆಚರಿಸಲು ಸರಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ.
ಮುಂದಿನ ತಿಂಗಳ 5ರಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸರಳ ಹಾಗೂ ಸುರಕ್ಷಿತವಾಗಿ ಆಚರಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡೂ ಕಾರ್ಯಕ್ರಮಗಳನ್ನು ಸೀಮಿತ ಅವಧಿಯೊಳಗೆ ನಡೆಸಬೇಕಿದೆ. ಒಟ್ಟು 76 ನಿಮಿಷಗಳಲ್ಲಿ ಕಾರ್ಯಕ್ರಮ ಪೂರ್ಣಗೊಳ್ಳಬೇಕಿದೆ. ನಾಡಗೀತೆ, ರೈತಗೀತೆಯನ್ನು ಕೂಡ ಶಿಕ್ಷಕರೇ ಹಾಡಬೇಕು, ನಾಲ್ವರು ಮಾತ್ರ ಭಾಗವಹಿಸಬಹುದು.
ವೇದಿಕೆಯಲ್ಲಿ 6, ಮುಂಭಾಗದಲ್ಲಿ 30ಜನ ಮಾತ್ರ!
ಕಾರ್ಯಕ್ರಮದ ವೇದಿಕೆಯ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಹಿತ ಆರು ಜನರಿಗೆ ಮಾತ್ರ ಕುಳಿತುಕೊಳ್ಳುವುದಕ್ಕೆ ಅವಕಾಶವಿದೆ. ವೇದಿಕೆಯ ಮುಂಭಾಗದಲ್ಲಿ ಮೂರು ಸಾಲುಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧ್ಯಕ್ಷರು ಹಾಗೂ ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸೇರಿ ಒಟ್ಟು 30 ಜನರಿಗೆ ಮಾತ್ರ ವೈಯಕ್ತಿಕ ಅಂತರವನ್ನು ಕಾಯ್ದುಕೊಂಡು ಆಸನದ ವ್ಯವಸ್ಥೆ ಮಾಡಬೇಕು. ವೇದಿಕೆಯ ಎಡ, ಬಲದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮಾಧ್ಯಮದವರಿಗೆ ಅವಕಾಶ ನೀಡಲಾಗಿದೆ. ಆಹ್ವಾನ ಪತ್ರಿಕೆಯನ್ನು ಕೂಡ 50 ಮಂದಿಗೆ ಮೀರದಂತೆ ಮುದ್ರಿಸಬೇಕಾಗಿದೆ. ಆಹ್ವಾನ ಪತ್ರಿಕೆಯೊಂದಿಗೆ ಬರುವವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ.
ಜಿಲ್ಲೆ, ತಾಲೂಕು ಮತ್ತು ಶಾಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 5ರಂದೇ ಆಚರಿಸಬೇಕು. ಕಾರ್ಯಕ್ರಮ ಸಭಾಂಗಣದ ಪ್ರವೇಶದ ಬಳಿ ಥರ್ಮಲ್ ಸ್ಕ್ಯಾನಿಂಗ್, ವೈಯಕ್ತಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಖಚಿತಪಡಿಸಬೇಕಿದೆ. ಕುಡಿಯುವ ನೀರನ್ನು ಸುರಕ್ಷಿತ ವಿಧಾನದಲ್ಲಿ ಪೂರೈಸಬೇಕು, ಆದರೆ ಕಾರ್ಯಕ್ರಮದಲ್ಲಿ ಊಟ/ಉಪಾಹಾರದ ವ್ಯವಸ್ಥೆಯನ್ನು ಮಾಡಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಆದೇಶಿಸಿದ್ದಾರೆ.