ಉಡುಪಿ: ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿಯನ್ನು ಶುಕ್ರವಾರ ಆಚರಿಸಲಾಯಿತು. ಜಾಗರಣೆ, ಭಜನೆ ಮಹಾ ಪುಣ್ಯದಾಯಕವೆಂದು ಪುರಾಣಗಳ ಉಕ್ತಿಯಂತೆ ಅಹೋರಾತ್ರಿ ಭಜನಾ ಸಂಕೀರ್ತನೆ ನಡೆಸಿದರೆ, ಕೆಲವರು ಉಪವಾಸ ವ್ರತ ಕೈಗೊಂಡರು.
ಶಿವರಾತ್ರಿ ನಿಮಿತ್ಯ ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ಭಕ್ತಾದಿಗಳ ಜನಸಾಗರವೇ ಹರಿದು ಬಂದಿತು. ಶಿವನ ದರುಶನ ಪಡೆಯಲು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು, ದೇವರ ದರುಶನ ಪಡೆದರು. ಜಿಲ್ಲೆಯ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಆರಾಧನೆಗಳು ನಡೆದವು. ದೇವರ ಮೂರ್ತಿ ಸಹಿತ ದೇವಸ್ಥಾನಗಳಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ಮಹಾಶಿವರಾತ್ರಿಯಂದು ಬೆಳಗಿನ ಜಾವದಲ್ಲಿಯೇ ಶಿವನ ದರುಶನ ಪಡೆದರೆ ಜನ್ಮ ಪಾವನವಾಗುತ್ತದೆಂಬ ನಂಬಿಕೆಯಿಂದ ಭಕ್ತಾದಿಗಳು ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷವಾಗಿತ್ತು. ಶಿವನಿಗೆ ಅಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ ಸೇರಿ ಇನ್ನಿತರ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಉಡುಪಿ ಸುತ್ತಮುತ್ತಲ ಪುರಾಣ ಪ್ರಸಿದ್ಧ ಬನ್ನಂಜೆ ಮಹಾಲಿಂಗೇಶ್ವರ, ಕೊಡವೂರು ಶಂಕರನಾರಾಯಣ, ಉದ್ಯಾವರ ಶಂಭುಶೈಲೇಶ್ವರ, ಮಲ್ಪೆ ಸರ್ವೇಶ್ವರ, ಚಕ್ರತೀರ್ಥ ಉಮಾಮಹೇಶ್ವರ, ಪರ್ಕಳ ಮಹಾಲಿಂಗೇಶ್ವರ, ಹೇರೂರು ಮಹಾಲಿಂಗೇಶ್ವರ, ಪೆರಂಪಳ್ಳಿ ಮಹಾಲಿಂಗೇಶ್ವರ, ಶಿವಪಾಡಿ ಉಮಾಮಹೇಶ್ವರ, ಕಲ್ಯಾಣಪುರ ಮಹಾಲಿಂಗೇಶ್ವರ, ಪಡುಬಿದ್ರೆ ಮಹಾಲಿಂಗೇಶ್ವರ, ಬ್ರಹ್ಮಾವರ ಮಹಾಲಿಂಗೇಶ್ವರ, ಕಟಪಾಡಿ ವಿಶ್ವನಾಥ ಕ್ಷೇತ್ರ ಮೊದಲಾದ ದೇಗುಲದಲ್ಲಿ ಸಹಸ್ರಾರು ಭಕ್ತರು ದೇವರ ದರುಶನ ಪಡೆದರು. ವಿಶೇಷ ಪೂಜಾದಿ ಸೇವೆಗಳನ್ನು ನಡೆಸಿ ಕೃತಾರ್ಥರಾದರು.
ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ, ಕಿರಿ ಮಂಜೇಶ್ವರ ಅಗಸ್ತ್ಯೇಶ್ವರ, ಹೇರಂಜಾಲು ಗುಡೇ ಮಹಾಲಿಂಗೇಶ್ವರ, ಬೈಂದೂರು ಸೇನೇಶ್ವರ, ಕುಂದಾಪುರ ಮೈಲಾರೇಶ್ವರ, ಹಿಲ್ಕೋಡು ಮಹಾಲಿಂಗೇಶ್ವರ, ಹೆಬ್ರಿ ಅರ್ಧನಾರೀಶ್ವರ, ನಂದಳಿಕೆ ಮಹಾಲಿಂಗೇಶ್ವರ, ನಿಟ್ಟೆ ಬ್ರಹ್ಮಲಿಂಗೇಶ್ವರ, ಮಿಯ್ಯಾರು ಮಹಾಲಿಂಗೇಶ್ವರ, ಎಲ್ಲೂರು ವಿಶ್ವೇಶ್ವರ, ಉಚ್ಚಿಲ ಮಹಾಲಿಂಗೇಶ್ವರ, ದೇಲಟ್ಟು ಮಹಾಲಿಂಗೇಶ್ವರ, ಮರವಂತೆ ಗಂಗಾಧರೇಶ್ವರ, ಮುರೂರು ಮಹಾಲಿಂಗೇಶ್ವರ, ಕಾಳಾವರ ಮಹಾಲಿಂಗೇಶ್ವರ, ಕೋಟೇಶ್ವರ ಕೋಟಿಲಿಂಗೇಶ್ವರ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಕುಂದೇಶ್ವರ, ಗುಜ್ಜಾಡಿ ಗುಹೇಶ್ವರ, ಉಳ್ತೂರು ಮಹಾಲಿಂಗೇಶ್ವರ, ತೆಕ್ಕಟ್ಟೆ ಮಹಾಲಿಂಗೇಶ್ವರ, ಹಟ್ಟಿಯಂಗಡಿ ಲೋಕನಾಥೇಶ್ವರ, ಕುಂಭಾಸಿ ಶ್ರೀಹರಿಹರ ಕ್ಷೇತ್ರದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾದಿ ಗಳು, ಬಿಲ್ವಾರ್ಚನೆ, ರುದ್ರಾಭಿಷೇಕ ನಡೆದವು.
ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲಿ ಸಡಗರ ಕುಂದಾಪುರದ ಪಂಚ ಶಂಕರನಾರಾಯಣ ಕ್ಷೇತ್ರಗಳಾದ ಬೆಳ್ವೆ ಶ್ರೀಶಂಕರನಾರಾಯಣ, ಆವರ್ಸೆ ಶ್ರೀಶಂಕರನಾರಾಯಣ, ಮಾಂಡವಿ ಶ್ರೀಶಂಕರನಾರಾಯಣ, ಕ್ರೋಢ ಶ್ರೀಶಂಕರನಾರಾಯಣ ಮತ್ತು ಹೊಳೆ ಶ್ರೀಶಂಕರನಾರಾಯಣ ದೇವಸ್ಥಾನಗಳಲ್ಲಿ ವಿಶೇಷ ಪೂಜಾದಿಗಳು ನಡೆದವು. ಅನೇಕ ಭಕ್ತರು ಏಕಕಾಲದಲ್ಲಿ ಪಂಚಕ್ಷೇತ್ರ ಸಂದರ್ಶಿಸಿ ಪುನೀತರಾದರು. ಕ್ಷೇತ್ರದ ಪುಣ್ಯತೀರ್ಥದಲ್ಲಿ ಮಿಂದು ದೇವರ ದರ್ಶನ ಪಡೆದರು.
ಅನಂತೇಶ್ವರ -ಚಂದ್ರೇಶ್ವರ ದೇವಸ್ಥಾನದಲ್ಲಿ ಉಡುಪಿಯ ಅತ್ಯಂತ ಪುರಾತನ ಹಾಗೂ ಪುರಾಣ ಪ್ರಸಿದ್ಧ ಶ್ರೀಮದನಂತೇಶ್ವರ ಹಾಗೂ ಶ್ರೀಚಂದ್ರಮೌಳೀಶ್ವರ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತಾದಿಗಳು ಭೇಟಿ ನೀಡಿ ಈಶ್ವರನ ದರ್ಶನ ಪಡೆದರು. ಮಹಾಶಿವರಾತ್ರಿ ಪ್ರಯುಕ್ತ ಈ ಎರಡೂ ಶಿವಾಲಯಗಳನ್ನು ವಿಶೇಷ ಹೂವಿನ ಅಲಂಕಾರ, ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.