ಕೋಲಾರ: ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾಪಟುಗಳಿದ್ದು, ಕ್ರೀಡೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಶೀಘ್ರವಾಗಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ನಾಗೇಶ್ ಭರವಸೆ ನೀಡಿದರು.
ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ನೂತನ ನಿರ್ದೇಶಕರು,ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಿಂಥೆಟಿಕ್ ಟ್ರ್ರ್ಯಾಕ್ ಅತ್ಯಾವಶ್ಯಕವಾಗಿದೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಥ್ಲೆಟಿಕ್ಸ್, ಕಬಡ್ಡಿ ಸೇರಿದಂತೆ ಪ್ರತಿಭಾವಂತ ಕ್ರೀಡಾಪಟುಗಳಿದ್ದು ಅವರಿಗೆಲ್ಲ ತರಬೇತಿ ನೀಡಿದರೇ ಪ್ರತಿಭೆಗಳನ್ನು ಹೊರತರಲು ಸಾಧ್ಯವಾಗುತ್ತದೆ ಎಂದರು.
ಕ್ರೀಡಾ ಶಿಬಿರಗಳು ಮಕ್ಕಳಲ್ಲಿ ಕ್ರೀಡಾ ಮನೋಭಾವ ವೃದ್ಧಿಸಿ ಸಮಾಜಕ್ಕೆ ಉತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಬಹುದು ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಶಿಬಿರಗಳನ್ನು ಇಲಾಖೆಯ ಸಹಯೋಗದಲ್ಲೂ ಆಯೋಜಿಸಿ ಉತ್ತಮ ಬೆಳವಣಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಮೂಲ ಸೌಲಭ್ಯಗಳ ಕೊರತೆಯ ನಡುವೆಯೂ ಕ್ರೀಡಾ ಬೆಳವಣಿಗೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಮುಖ ಸ್ಥಾನ ಪಡೆದುಕೊಂಡಿದೆ ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳ ಕೊರತೆಯೋ, ತರಬೇತಿ ಅಲಭ್ಯವೋ ಜಿಲ್ಲೆಯಲ್ಲಿ ಕ್ರೀಡಾ ಕ್ಷೇತ್ರ ಕ್ಷೀಣಿಸುತ್ತಿದೆ ಅದನ್ನು ಬೆಳೆಸಲು ಸಂಪೂರ್ಣವಾಗಿ ಸಹಕಾರ ನೀಡಲಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ತಹಶೀಲ್ದಾರ್ ಶೋಭಿತಾ,ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಜಯದೇವ್, ಗೌರವ ಅಧ್ಯಕ್ಷ ಅಂಚೆ ಅಶ್ವಥ್, ಉಪಾಧ್ಯಕ್ಷ ಶ್ರೀನಿವಾಸನ್, ಪದಾಧಿಕಾರಿಗಳಾದ ಪಲ್ಲವಿಮಣಿ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.