ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಭೀತಿ ರಕ್ತನಿಧಿ ಕೇಂದ್ರಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ರೋಗಿಗಳಿಗೆ ರಕ್ತದ ಕೊರತೆ ಎದುರಾಗಲಾರಂಭಿಸಿದೆ. ರಕ್ತದಾನಿಗಳನ್ನು ಕೈಮುಗಿದು ಕರೆಯುತ್ತಿವೆ ಬ್ಲಡ್ ಬ್ಯಾಂಕ್ಗಳು.
ಕೊರೋನಾ ಹರಡುವಿಕೆಯ ಭೀತಿಯಿಂದಾಗಿ ಜನ ಹೊರಗಡೆ ಓಡಾಡುವ ಪ್ರಮಾಣ ಕಡಿಮೆಯಾಗಿದೆ. ಕಳೆದ 15 ದಿನಗಳಿಂದ ಜನ ರಕ್ತದಾನ ಮಾಡಲು ಹಿಂದೇಟಾಕುತ್ತಿದ್ದಾರೆ. ರಕ್ತದಾನ ಶಿಬಿರಗಳು ಸ್ಥಗಿತಗೊಂಡಿವೆ. ಹೀಗಾಗಿ ಬ್ಲಡ್ ಬ್ಯಾಂಕ್ ಗಳಲ್ಲಿ ಶೇ.80ರಷ್ಟು ರಕ್ತದ ಕೊರತೆ ಎದುರಾಗಲಾರಂಭಿಸಿದೆ.
ಭೀತಿಯಲ್ಲಿ ರೋಗಿಗಳು: ಥಲಸ್ಸೇಮಿಯಾದಿಂದ ಬಳಲುತ್ತಿರುವ 60 ಮಕ್ಕಳು ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದಲ್ಲಿ ರಕ್ತಕ್ಕಾಗಿ ದಾಖಲಿಸಿಕೊಂಡಿದ್ದಾರೆ. ಒಂದೇ ಕೇಂದ್ರದಲ್ಲಿ ಪ್ರತಿನಿತ್ಯ 25 ರಿಂದ 30 ಮಕ್ಕಳಿಗೆ ರಕ್ತ ನೀಡಲೇಬೇಕು. ವಾಣಿ ವಿಲಾಸ, ವಿಕ್ಟೋರಿಯಾ, ಕಿಮ್ಸ್ ಅನೇಕ ಆಸ್ಪತ್ರೆಗಳು ರಕ್ತನಿಧಿಗಳನ್ನೇ ನಂಬಿಕೊಂಡಿದ್ದು ಕಳೆದ 15 ದಿನಗಳಿಂದ ರಕ್ತದ ಕೊರತೆ ಎದುರಾಗಲಾರಂಭಿಸಿದೆ. ರಕ್ತದಾನಿಗಳು ಬಾರದೇ ಇರುವುದರಿಂದ ರಾಜ್ಯಾದ್ಯಂತ ರಕ್ತದಾನ ಶಿಬಿರಗಳು ರದ್ದಾಗಲಾರಂಭಿಸಿವೆ. ಹೀಗಾಗಿ ರಾಷ್ಟ್ರೋತ್ಥಾನ ಶಾಲೆಗಳ ಶಿಕ್ಷಕರು, ಸಿಬ್ಬಂದಿಯಿಂದ ರಕ್ತ ಪಡೆದು ಬೇಡಿಕೆ ಪೂರೈಸಲಾಗುತ್ತಿದೆ. ಆದರೆ ಎಲ್ಲಾ ಸ್ಬಿಬಂದಿಗಳಿಂದ ಪಡೆದ ಬಳಿಕ ಮುಂದೇನು ಎಂಬ ಪ್ರಶ್ನೆ ಕಾಡಲಾರಂಭಿದೆ.
ರೆಡ್ ಕ್ರಾಸ್ನಲ್ಲೂ ರಕ್ತ ಇಲ್ಲ..!: ಮುಂದಿನ ಕೆಲ ದಿನಗಳ ಕಾಲ ರೆಡ್ ರಕ್ತದಾನ ಶಿಬಿರಗಳು ರದ್ದಾಗಿವೆ. ಹೀಗಾಗಿ
ರಕ್ತದ ಸಂಗ್ರಹಣೆ ಪ್ರಮಾಣ ಕುಂಠಿತವಾಗಲಾರಂಭಿಸಿದೆ. ಹೀಗಾಗಿ ರಾಜ್ಯಾದ್ಯಂತ ಓಡಾಡುತ್ತಿರುವ ರೆಡ್ಕ್ರಾಸ್ ಬಸ್ಗಳಿಗೆ ಬಂದು ರಕ್ತದಾನ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ರಾಜ್ಯದಲ್ಲಿರುವ 8 ರೆಡ್ಕ್ರಾಸ್ ರಕ್ತನಿಧಿ ಕೇಂದ್ರಗಳಲ್ಲಿ ಪ್ರತಿನಿತ್ಯ ಕನಿಷ್ಠ ತಲಾ 100 ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು. ಆದರೆ ಕೊರೋನಾ ಪ್ರಭಾವದಿಂದಾಗಿ ಶೇ.80ರಷ್ಟು ರಕ್ತದಾನ ಕಡಿಮೆಯಾಗಿದೆ. ಒಂದೆರಡು ಕಡೆ ಸಿಬ್ಬಂಧಿ ಒತ್ತಾಯಕ್ಕೆ ಒಬ್ಬರೋ ಇಬ್ಬರೋ ಬಂದು ಬಸ್ಗಳಲ್ಲಿ ರಕ್ತದಾನ ನಡೆಸುತ್ತಿದ್ದಾರೆ. ರಕ್ತದಾನದ ವೇಳೆ ಕೊರೋನ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ವಹಿಸಲಾಗುತ್ತಿದೆ.
ಪ್ರತಿನಿತ್ಯ ಅಪಘಾತಗಳಿಗೆ, ಕ್ಯಾನ್ಸರ್ ಪೀಡಿತರಿಗೆ, ಹೆರಿಗೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಬೇಡಿಕೆಗಳು ಹೆಚ್ಚಾಗುತ್ತಿವೆ. ಬೇಡಿಕೆಗೆ ತಕ್ಕಂತೆ ರಕ್ತದಸಂಗ್ರಹವಾಗುತ್ತಿಲ್ಲ. ಹೀಗಾಗಿ ಜನ ರಕ್ತಕ್ಕಾಗಿ ಪರದಾಡುವಂತಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಕೊರೋನಾ ವೈರಸ್ ಗಿಂದ ರಕ್ತದ ಕೊರತೆಯಿಂದಾಗಿ ವಿವಿಧ ರೋಗಗಳಿಗೆ ಜನ ಬಲಿಯಾಗುವ ಭೀತಿ ಎದುರಾಗಿದೆ.
-ಪ್ರಜ್ಞಾ ಪಾಲ್ತಾಡಿ