Saturday, July 2, 2022

Latest Posts

ಜೂನ್ 11 ರಿಂದ ಒಂದು ಯೂನಿಟ್‌ಗೆ 10 ಕೆ.ಜಿ. ಅಕ್ಕಿ, ಕುಟುಂಬಕ್ಕೆ ತಲಾ 2 ಕೆ.ಜಿ. ಬೇಳೆ , ಗೋಧಿ ವಿತರಣೆಗೆ ಕ್ರಮ: ಸಚಿವ ಗೋಪಾಲಯ್ಯ

ಚಿತ್ರದುರ್ಗ: ಜೂನ್ ೧೧ ರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲಿನ ಒಂದು ಯೂನಿಟ್‌ಗೆ ೧೦ ಕೆ.ಜಿ. ಅಕ್ಕಿ, ಕುಟುಂಬಕ್ಕೆ ತಲಾ ೨ ಕೆ.ಜಿ. ಬೇಳೆ ಹಾಗೂ ಗೋಧಿ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಜಿಲ್ಲೆಯ ಹಿರಿಯೂರು ನಗರದ ಎಪಿಎಂಸಿ ಆವರಣದಲ್ಲಿನ ಗೋದಾಮು ಹಾಗೂ ಚಿತ್ರದುರ್ಗ ನಗರ ಹಾಗೂ ಗ್ರಾಮಾಂತರ ಟಿಎಪಿಸಿಎಂಎಸ್ ಪಡಿತರ ಸಗಟು ಆಹಾರ ಧಾನ್ಯ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಹಾರ ದಾಸ್ತಾನು ಗೋದಾಮಿನಲ್ಲಿ ಅಕ್ಕಿ, ಗೋಧಿ, ಬೇಳೆ, ಕಡಲೆ ಕಾಳು ಸೇರಿದಂತೆ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರದೊಂದಿಗೆ ಮಾತನಾಡಿ, ಗೋದಾಮಿನಲ್ಲಿನ ಪದಾರ್ಥಗಳನ್ನು ಖುದ್ದು ವೀಕ್ಷಣೆ ಮಾಡುವ ಉದ್ದೇಶದಿಂದ ಭೇಟಿ ನೀಡುತ್ತಿದ್ದು, ಇದರಲ್ಲಿ ಏನಾದರೂ ನ್ಯೂನತೆಗಳು ಕಂಡು ಬಂದರೆ ಬದಲಾವಣೆ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಮಂಗಳವಾರದ ನಂತರ ಆಹಾರ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನಾಗಿ ಮಾಡಿ ರಾಜ್ಯಾದ್ಯಂತ ಆಹಾರ ವಿತರಣೆಗೆ ಮುನ್ನ ಅಧಿಕಾರಿಗಳು ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿನ ಗೋದಾಮುಗಳನ್ನು ತಂಡೋಪತಂಡವಾಗಿ ತಪಾಸಣೆ ನಡೆಸಲು ಚಿಂತನೆ ನಡೆಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಜನರಿಗೆ ಸರಿಯಾದ ರೀತಿಯಲ್ಲಿ ಆಹಾರ ಧಾನ್ಯಗಳ ವಿತರಣೆಯಾಗಬೇಕು ಎಂದು ಹೇಳಿದರು.
ಕಾರ್ಡ್ ಇಲ್ಲದ ಕುಟುಂಬಕ್ಕೆ ಪಡಿತರ ವಿತರಣೆ ಕ್ರಮ: ಕಡುಬಡವರಿಗೆ, ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರಿಗೆ, ಕಾರ್ಡ್ ಇಲ್ಲದ ಕುಟುಂಬಕ್ಕೂ ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು, ೧೦ ಕೆ.ಜಿ. ಅಕ್ಕಿ, ಗೋದಿ, ಬೇಳೆ, ಕಡ್ಲೆಕಾಳು ವಿತರಣೆ ಮಾಡಲಾಗುವುದು ಎಂದರು.
ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ರಾಜ್ಯಕ್ಕೆ ಆಗಮಿಸಿರುವ ೩ ಲಕ್ಷದ ೮೦ ಸಾವಿರ ಜನರಿಗೆ ಎರಡು ತಿಂಗಳ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ. ಜೂನ್ ತಿಂಗಳ ಅಂತ್ಯದವರೆಗೆ ಆಹಾರ ಪದಾರ್ಥಗಳ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿ ವಲಸೆ ಕಾರ್ಮಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಅನರ್ಹ ಪಡಿತರ ಚೀಟಿ ಹಿಂದಿರುಗಿಸಲು ಮನವಿ :
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಡಜನರಿಗಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಅನುಕೂಲ ಹೊಂದಿರುವ ಕುಟುಂಬ, ಸರ್ಕಾರಿ ನೌಕರರು, ನಿವೃತ್ತ ಸರ್ಕಾರಿ ನೌಕರರು ಹಾಗೂ ಕಾನೂನು ಬಾಹಿರವಾಗಿ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವವರು ಕಡ್ಡಾಯವಾಗಿ ಜೂನ್ ೩೦ ರೊಳಗೆ ಹಿಂದಿರುಗಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಜೂನ್ ೩೦ ರವರೆಗೆ ಅಕ್ರಮ ಪಡಿತರ ಚೀಟಿ ಹಿಂದಿರುಗಿಸಲು ಗಡುವು ನೀಡಲಾಗಿದೆ. ನಂತರ ಅಧಿಕಾರಿಗಳ ಸಭೆ ಕರೆದು ಇಲಾಖೆ ವತಿಯಿಂದ ತಪಾಸಣೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಎಫ್‌ಸಿಐ ಗೋದಾಮು ಅಕ್ಕಿ ವಾಪಸ್ :
ಚಿತ್ರದುರ್ಗಕ್ಕೆ ಪೂರೈಕೆ ಮಾಡಲಾಗಿರುವ ಎಫ್‌ಸಿಐ ಗೋದಾಮುನಿಂದ ನೀಡಲಾದ ಅಕ್ಕಿಯಲ್ಲಿ ಹುಳುಗಳು ಹೆಚ್ಚಿದ್ದು, ಉತ್ತಮ ಗುಣಮಟ್ಟದ ಅಕ್ಕಿಯನ್ನು ವಿತರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಉಗ್ರಾಣ ನಿಗಮದ ವ್ಯವಸ್ಥಾಪಕರಿಗೆ ಈ ಕುರಿತು ಪತ್ರವನ್ನು ಬರೆದು ವಾಪಸ್ ಪಡೆಯಲು ಸೂಚನೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಪಡಿತರ ಆಹಾರ ವಿತರಣೆಯಲ್ಲಿ ಕಳಪೆ ಗುಣಮಟ್ಟದ ಆಹಾರ ಧಾನ್ಯ ವಿತರಣೆಗೆ ಅವಕಾಶ ಕೊಡುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿನ ಗೋದಾಮುಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಸಾಮಾಜಿಕ ಅಂತರ ಕಾಪಾಡಲು ಸಲಹೆ :
ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳಿಂದ ಆಗಮಿಸಿದ ಜನರಿಗೆ ಕೋವಿಡ್-೧೯ ಸೋಂಕು ಹೆಚ್ಚು ದೃಢಪಟ್ಟಿದೆ. ಲಾಕ್‌ಡೌನ್ ಸಡಿಲಿಕೆಗೊಂಡಿರುವುದರಿಂದ ಪ್ರತಿಯೊಬ್ಬರು ಮಾಸ್ಕ್, ವೈಯಕ್ತಿಕ ಸ್ವಚ್ಛತೆ ಆದ್ಯತೆ, ಸಾಮಾಜಿಕ ಅಂತರ ಕಾಪಾಡಿ ತಮ್ಮನ್ನು ಹಾಗೂ ಕುಟುಂಬವನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಧುಸೂದನ್, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಉಮಾಶಂಕರ್, ಗೋಡಾನ್ ಕೀಪರ್ ಅಶೋಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss