Sunday, July 3, 2022

Latest Posts

ಜೂ.10 ರಂದು ರಾಜ್ಯಾದ್ಯಂತ ಪತ್ರ ಚಳವಳಿ: ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಚಿತ್ರದುರ್ಗ: ಭೋವಿ ಸಮುದಾಯ ಸೇರಿದಂತೆ ಇತರೆ ಆರು ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಜೂ.೧೦ ರಂದು ರಾಜ್ಯಾದ್ಯಂತ ಪತ್ರ ಚಳವಳಿ ನಡೆಸಲಾಗುವುದು ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಭೋವಿ ಹಾಸ್ಟೆಲ್ ಆವರಣದಲ್ಲಿ ಶ್ರೀರಾಮ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಭೋವಿ, ಲಂಬಾಣಿ, ಕೊರಚ, ಕೊರಮ, ಆದಿ ದ್ರಾವಿಡ, ಆದಿ ಕರ್ನಾಟಕ ಈ ಆರು ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ವದಂತಿ ಹಬ್ಬುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಕೆಲವು ಸಂಘಸಂಸ್ಥೆಗಳು ಜನಸಮುದಾಯಕ್ಕೆ ಈ ರೀತಿ ಸುಳ್ಳು ಸಂದೇಶ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಭೋವಿ, ಲಂಬಾಣಿ, ಕೊರಚ, ಕೊರಮ ಸೇರಿದಂತೆ ಆರು ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಕೆಲವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದು ಹೈಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣದಿಂದ ಸೂಕ್ತ ಪ್ರಾಧಿಕಾರದ ಮುಂದೆ ಹೋಗುವಂತೆ ಸೂಚಿಸಿತು. ಇದಾದ ಬಳಿಕ ಸುಪ್ರಿಂಕೋರ್ಟ್ ಈ ಕುರಿತು ಅರ್ಜಿ ಸಲ್ಲಿಸಲಾಯಿತು. ಆದರೆ ನ್ಯಾಯಾಲಯವು ಸೂಕ್ತ ಪ್ರಾಧಿಕಾರದ ಮುಂದೆ ಹಾಜರಾಗಲು ಸೂಚನೆ ನೀಡಿ, ೧೪-೨-೨೦೨೦ ರಂದು ಈ ಅರ್ಜಿಯನ್ನು ವಿಲೇವಾರಿ ಮಾಡಿದೆ ಎಂದರು.
ಅದರಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಈ ಅರ್ಜಿಯನ್ನು ಪರಿಶೀಲಿಸಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ಈ ಆರು ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ಕುರಿತು ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ. ಆದರೆ ಈ ಸಮುದಾಯಗಳನ್ನು ಕೈಬಿಡುವ ಕುರಿತು ಎಲ್ಲಿಯೂ ಪ್ರಾಸ್ತಾಪಿಸಿಲ್ಲ. ಆದರೆ ಕೆಲವರು ಈ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಸುಳ್ಳು ಸಂದೇಶ ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಆರು ಸಮಯದಾಯಗಳು ಅನೇಕ ದಶಕಗಳಿಂದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿವೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿಯೂ ಸಹ ಈ ಸಮುದಾಯಗಳನ್ನು ಸೇರಿಸಲಾಗಿದೆ. ಇದಾದ ಬಳಿಕ ಈ ಪಟ್ಟಿಯಲ್ಲಿ ಇತರೆ ಜಾತಿಗಳು ಸೇರಿ ೧೦೧ ಉಪಜಾತಿಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿವೆ. ಆದರೆ ಈ ಭೋವಿ, ಲಂಬಾಣಿ, ಕೊರಚ, ಕೊರಮ ಸೇರಿದಂತೆ ಈ ಸಮುದಾಯಗಳು ಇಂದಿಗೂ ಮಾನಸಿಕ ಅಸ್ಪೃಶ್ಯತೆ ಅನುಭವಿಸುತ್ತಿವೆ. ಮೀಸಲಾತಿ ಪಡೆದಾಗಿನಿಂದ ಈವರೆಗೆ ಶೇ.೧೧ ರ ಬದಲಾಗಿ ಕೇವಲ ಶೇ.೩ ರಷ್ಟು ಅಭಿವೃದ್ಧಿ ಸಾಧಿಸಿವೆ ಎಂದರು.
ಹಾಗಾಗಿ ಅನೇಕ ಸಭೆ, ಸಮಾರಂಭಗಳು, ಸಮಾವೇಶಗಳನ್ನು ನಡೆಸುವ ಮೂಲಕ ಈ ಸಮುದಾಯಗಳ ಸ್ಥಿತಿಗತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಈ ಸಮುದಾಯಗಳ ಹಿತರಕ್ಷಣೆ ದೃಷ್ಠಿಯಿಂದ ಇವನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲೇ ಮುಂದುವರಿಸಬೇಕಾದ ಅಗತ್ಯವಿದೆ. ಹಾಗಾಗಿ ಸರ್ಕಾರ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ವಿಚಾರವನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಪತ್ರ ಚಳವಳಿ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಪತ್ರ ಚಳವಳಿ ನಡೆಯಲಿದೆ. ರಾಜ್ಯಾದ್ಯಂತ ಇರುವ ಈ ಆರು ಸಮುದಾಯಗಳ ಜನರು ಈ ಪತ್ರ ಚಳವಳಿಯಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರೂ ಒಂದೊಂದು ಪತ್ರ ಬರೆಯುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವಾಗಬೇಕು. ಈ ಪತ್ರ ಚಳವಳಿಯಲ್ಲಿ ಒಟ್ಟು ೨೫ ಲಕ್ಷ ಪತ್ರಗಳನ್ನು ಬರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮೀಸಲಾತಿ ಸಂರಕ್ಷಣೆ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಬಂಜಾರ ಸಮಾಜದ ರಾಜ್ಯ ಮುಖಂಡ ರಾಘವೇಂದ್ರ ನಾಯ್ಕ, ಕೊರಚ, ಕೊರಮ ಸಮಾಜದ ಜಿಲ್ಲಾಧ್ಯಕ್ಷ ವೈ.ಕುಮಾರ್, ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಹೆಚ್. ಲಕ್ಷ್ಮಣ್, ಭೋವಿ ಗುರುಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss