ಹೊಸ ದಿಗಂತ ವರದಿ, ಮಡಿಕೇರಿ:
ಕಾಂಗ್ರೆಸ್ ಕಡೆ ಮುಖ ಮಾಡಿರುವ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ನೇರವಾಗಿ ಜೆಡಿಎಸ್ ತೊರೆಯದೆ ವಿನಾಕಾರಣ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ. ಅಲ್ಲದೆ ಪಕ್ಷ ಬಿಡಲು ಸಿದ್ಧವಿರುವ ಹುಳಗಳು ಮೊದಲು ಪಕ್ಷ ತೊರೆಯಲಿ ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ಧತೆ ನಡೆಸಿರುವ ಜೀವಿಜಯ ಅವರು ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆ ತರುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.
ತಮ್ಮ ಪುತ್ರನ ರಾಜಕೀಯ ಭವಿಷ್ಯವನ್ನು ಉಜ್ವಲಗೊಳಿಸುವುದಕ್ಕಾಗಿ ಕಾಂಗ್ರೆಸ್ ಕಡೆಗೆ ಮುಖ ಮಾಡಿರುವ ಜೀವಿಜಯರಿಂದ ಆ ಪಕ್ಷಕ್ಕೆ ನಷ್ಟವೇ ಹೊರತು ಲಾಭವೇನಿಲ್ಲ, ಅದೇ ರೀತಿ ಕಾಂಗ್ರೆಸ್ ಪಕ್ಷ ಜೀವಿಜಯ ಅವರಿಗೆ ಮೋಸ ಮಾಡಲೆಂದೇ ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಪುತ್ರ ವ್ಯಾಮೋಹದ ರಾಜಕಾರಣಿಗಳ ಮಾತು ಕೇಳಿ ಜೆಡಿಎಸ್ ಕಾರ್ಯಕರ್ತರು ತಮ್ಮ ರಾಜಕೀಯ ಭವಿಷ್ಯವವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ ಗಣೇಶ್ ಅವರು, ಯಾರೊಬ್ಬರೂ ಜೀವಿಜಯರ ಹಿಂದೆ ಹೋಗುವುದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬಿ’ ಟೀಮ್ ಅಲ್ಲ: ಜೆಡಿಎಸ್ ಪಕ್ಷ ಬಿಜೆಪಿ ಸ್ನೇಹ ಮಾಡಿದೆ, ಆ ಕಾರಣಕ್ಕಾಗಿ ನಾನು ಪಕ್ಷ ಬಿಡುತ್ತಿದ್ದೇನೆ ಎಂದು ಜೀವಿಜಯ ಅವರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಜೆಡಿಎಸ್ ಜಾತ್ಯತೀತ ನಿಲುವಿನ ಪ್ರಾದೇಶಿಕ ಪಕ್ಷವಾಗಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ನ ‘ಬಿ’ ಟೀಮ್ ಅಲ್ಲವೆಂದು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ಜೀವನದಲ್ಲಿ 11 ಬಾರಿ ಚುನಾವಣೆಯನ್ನು ಎದುರಿಸಿ ಕೇವಲ ಎರಡು ಬಾರಿ ಮಾತ್ರ ಗೆಲುವು ಕಂಡಿರುವ ಜೀವಿಜಯ ಅವರಿಗೆ ಜನ ಬೆಂಬಲವಿಲ್ಲ. ಮತ್ತೊಂದೆಡೆ ಕೊಡಗಿನಲ್ಲಿ ನಿಷ್ಕ್ರಿಯವಾಗಿರುವ ಕಾಂಗ್ರೆಸ್ ಪಕ್ಷ ನಾಯಕರ ಕೊರತೆಯನ್ನು ಎದುರಿಸುತ್ತಿದೆ. ಮನೆಯೊಂದು ನೂರು ಬಾಗಿಲಾಗಿರುವ ಕಾಂಗ್ರೆಸ್ಗೆ ಜೀವಿಜಯ ಅವರು ನೂರ ಒಂದನೇ ಬಾಗಿಲು ಎಂದು ಗಣೇಶ್ ವ್ಯಂಗ್ಯವಾಡಿದರು.
ಸುಮಾರು 14 ತಿಂಗಳುಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಮೋಘ ಸೇವೆ ಮಾಡಿದ ಕುಮಾರಸ್ವಾಮಿ ಅವರ ಸೇವೆಯನ್ನು ಕೊಡಗಿನ ಜನ ಎಂದಿಗೂ ಮರೆಯುವುದಿಲ್ಲ. ಕುಮಾರಸ್ವಾಮಿ ಅವರ ಘನತೆ ಏನು ಎನ್ನುವುದು ಜಿಲ್ಲೆಯ ಜನತೆಗೆ ತಿಳಿದಿದೆ. ಜೀವಿಜಯ ಅವರ ಅಪಪ್ರಚಾರದಿಂದ ಯಾವುದೇ ದಕ್ಕೆಯಾಗುವುದಿಲ್ಲವೆಂದು ಅವರು ತಿಳಿಸಿದರು.
ಕುಶಾಲನಗರ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ಜೆಡಿಎಸ್ ನಾಯಕರು ಬಿಜೆಪಿ ಪರ ಇದ್ದರು ಎಂದು ಜೀವಿಜಯ ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸ್ವತ: ಜೀವಿಜಯ ಅವರೇ ತಮ್ಮ ಮನೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ನೀಡಿದ ಸಲಹೆಯ ವಿಡಿಯೋ ದೃಶ್ಯಾವಳಿ ನಮ್ಮ ಬಳಿ ಇದ್ದು, ಸಕಾಲದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು.
ಪಕ್ಷದಲ್ಲಿದ್ದುಕೊಂಡೇ ಮನೆ ಹಾಳು ಮಾಡುವ ಕೆಲಸ ಮಾಡಿದರೆ ಅವರು ಯಾರೇ ಆಗಿದ್ದರೂ ಅಮಾನತು ಮಾಡುವುದಾಗಿ ಗಣೇಶ್ ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತರ ಯಾವುದೇ ನೋವುಗಳಿಗೆ ಸ್ಪಂದಿಸದ ಜೀವಿಜಯ ಅವರಿಗೆ ಇದೀಗ ದಿಢೀರ್ ಆಗಿ ಕಾಂಗ್ರೆಸ್ ಸೇರ್ಪಡೆ ಹೊತ್ತಿನಲ್ಲಿ ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ಬಂದಿದೆ ಎಂದು ಟೀಕಿಸಿದ ಅವರು, ಕೆಲವು ವರ್ಷಗಳ ಹಿಂದೆ ತಮ್ಮ ಮನೆಯ ಪಕ್ಕದ ಮಸೀದಿಯಲ್ಲೇ ಖುರಾನ್ ನ್ನು ದಹಿಸಿದಾಗ ಸಾಂತ್ವನ ಹೇಳುವ ಮನಸ್ಸು ಅವರಿಗೆ ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು