ಹೊಸದಿಗಂತ ವರದಿ, ಕೋಲಾರ:
ನಗರದ ಆರ್ಟಿಒ ಕಚೇರಿ ಸಮೀಪದ ಜೆಡಿಎಸ್ ಪಕ್ಷದ ನಿವೇಶನದಲ್ಲಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಡಿ.9ರಂದು ಗುದ್ದಲಿಪೂಜೆ ಹಮ್ಮಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಶಾಸಕ ಶ್ರೀನಿವಾಸಗೌಡರ ಅಧ್ಯಕ್ಷತೆಯಲ್ಲಿ ನಗರದ ರವಿ ಕಾಲೇಜಿನಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಡಿ.9ರ ಬೆಳಗ್ಗೆ 8 ಗಂಟೆಗೆ ಹೆಚ್.ಡಿ.ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದು, ಸುಮಾರು 1000 ಬೈಕ್ಗಳಲ್ಲಿ ಕಾರ್ಯಕರ್ತರು ರ್ಯಾಲಿ ಮೂಲಕ ಅವರನ್ನು ಸ್ವಾಗತಿಸಲು ಸಜ್ಜಾಗಬೇಕು ಎಂದು ಸೂಚಿಸಿದರು.
ಕಟ್ಟಡದ ಗುದ್ದಲಿಪೂಜೆ ಬಳಿಕ ನಗರ ಹೊರವಲಯದ ರತ್ನ ಕಲ್ಯಾಣಮಂಟಪದಲ್ಲಿ 10 ಗಂಟೆಗೆ ಗ್ರಾಪಂ ಚುನಾವಣೆ ಸಂಬಂಧ ನಡೆಯಲಿರುವ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಎಲ್ಲರೂ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಕುಮಾರಸ್ವಾಮಿ ಬರುತ್ತಿರುವುದರಿಂದಾಗಿ ಜಿಲ್ಲೆಯಿಂದ ಹೆಚ್ಚಿನ ಜನರು ಸೇರಬೇಕು. ಎಲ್ಲ ಸಮಾಜದವರ ಪಾಲ್ಗೊಳ್ಳುವಿಕೆಯೂ ಮುಖ್ಯವಾಗಿದೆ. ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ನಿಮ್ಮ ವ್ಯಾಪ್ತಿಯ ಜವಾಬ್ದಾರಿ ನೀವೇ ನೋಡಿಕೊಳ್ಳಬೇಕು. ಸಮಸ್ಯೆ ಇರುವ ಕಡೆಗೆ ನಾವು ಬರುತ್ತೇವೆ, ಸಾಧ್ಯವಾದರೆ ಅವಿರೋಧ ಆಯ್ಕೆಗೆ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ಎಂಎಲ್ಸಿ ಚೌಡರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಮೂರಂಡಹಳ್ಳಿ ಗೋಪಾಲಪ್ಪ, ಮುಖಂಡರಾದ ಬಣಕನಹಳ್ಳಿ ನಟರಾಜ್, ಜಿ.ನರೇಶ್ಬಾಬು, ಶಬರೀಶ್, ಆನಂದ್ ಮತ್ತಿತರರು ಉಪಸ್ಥಿತರಿದ್ದರು.