ಮೈಸೂರು: ನಂಜನಗೂಡಿನ ಜ್ಯುಬಿಲಿಯಂಟ್ ಔಷಧ ಕಾರ್ಖಾನೆಯಲ್ಲಿ ಕೊರೋನಾ ಸೋಂಕಿನ ಮೂಲ ಹಾಗೂ ಆ ನಂತರ ನಡೆದಿರುವ ಬೆಳವಣಿಗೆ ಕುರಿತ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಗ್ರಹಿಸಿದರು.
ಮಂಗಳವಾರ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆ ಕಾರ್ಖಾನೆ ಪುನರಾರಂಭಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಆದರೆ ಅಲ್ಲಿ ನಡೆದ ಪ್ರಕರಣಗಳ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಕೊರೋನಾ ಸೋಂಕಿನ 70 ಕ್ಕೂ ಹೆಚ್ಚು ಪ್ರಕರಣಗಳು ಈ ಕಾರ್ಖಾನೆಯಿಂದಲೇ ಹರಡಿದ್ದು. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ನಾವು ಒತ್ತಾಯ ಮಾಡಿದ್ದೆವು. ಕಾರ್ಖಾನೆಯ ಎಂಡಿ ಅವರನ್ನು ಕರೆಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ ಸೋಮಣ್ಣ ಹೇಳಿದ್ದರು.
ನಂತರ ಅವರೇ ಬದಲಾವಣೆ ಆದರು. ತನಿಖೆಗೆ ಒತ್ತಾಯಿಸುತ್ತಿದ್ದ ಶಾಸಕ ಹರ್ಷವರ್ಧನ್ ಯು ಟರ್ನ್ ಆಗಿದ್ದು, ಸಾಕಷ್ಟು ಪ್ರಭಾವ ಒತ್ತಡ ಬಂತು ಅಂತ ಹೇಳುತ್ತಿದ್ದಾರೆ. ಇದುವರೆಗೂ ಕಾರ್ಖಾನೆ ಮೇಲೆ ಯಾವುದೇ ಕೇಸು ದಾಖಲಾಗಿಲ್ಲ. ಚೈನಾದಿಂದ ಕಚ್ಚಾ ಪದಾರ್ಥಗಳು ಬಂದಿದೆ ಎಂಬುದನ್ನು ಸ್ಥಳೀಯ ಶಾಸಕರೇ ಹೇಳಿದ್ದಾರೆ.
ಪ್ರಕರಣದ ಸತ್ಯ ತಿಳಿಯಲು ಸರಕಾರವೇ ನೇಮಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಹರ್ಷಾಗುಪ್ತ, ನಮ್ಮ ತನಿಖೆಗೆ ಜಿಲ್ಲೆಯ ಹಾಗೂ ಸ್ಥಳೀಯ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಹೇಳಿ ತನಿಖೆಯನ್ನೇ ಕೈಚೆಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ನೋಡಿದರೆ ಕಾರ್ಖಾನೆ ಮಾಲೀಕರ ಕಿಕ್ ಬ್ಯಾಕ್ ಆಮಿಷಕ್ಕೆ ಈ ಎಲ್ಲರೂ ಒಳಗಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಹಾಗಾಗಿ ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು.ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವೆಂಕಟೇಶ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.