ಹೊಸ ದಿಗಂತ ವರದಿ, ಕಾಸರಗೋಡು:
ಮಂಜೇಶ್ವರ ಶಾಸಕರಾದ ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ಆರೋಪಿಯಾಗಿರುವ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದಲ್ಲಿ ಠೇವಣಿದಾರರ ನಷ್ಟದ ಹೊಣೆಯನ್ನು ಮುಸ್ಲಿಂಲೀಗ್ ರಾಜ್ಯ ನೇತೃತ್ವವು ವಹಿಸಿಕೊಂಡಿಲ್ಲ ಎಂದು ಮುಸ್ಲಿಂಲೀಗ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿಎ ಮಜೀದ್ ತಿಳಿಸಿದ್ದಾರೆ. ನಷ್ಟದ ಹೊರೆಯನ್ನು ವಹಿಸಿಕೊಳ್ಳಲಾಗುವುದು ಎಂದು ತಮ್ಮ ಪಕ್ಷ ಎಂದೂ ಹೇಳಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಠೇವಣಿದಾರರ ಹಣವನ್ನು ಸಂಬಂಧಪಟ್ಟವರಿಗೆ ಎಂ.ಸಿ.ಖಮರುದ್ದೀನ್ ಅವರೇ ಹಿಂತಿರುಗಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕಾಗಿ ಪಕ್ಷವು ಅವರಿಗೆ ಆರು ತಿಂಗಳು ಅವಧಿ ನೀಡಿದೆ. ಬಳಿಕವೂ ಪರಿಹಾರ ಉಂಟಾಗದಿದ್ದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ಕೆಪಿಎ ಮಜೀದ್ ಮುನ್ಸೂಚನೆ ನೀಡಿದರು. ಇದೇ ವೇಳೆ ಎಂ.ಸಿ.ಖಮರುದ್ದೀನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅವರಲ್ಲಿ ಮುಸ್ಲಿಂಲೀಗ್ ನೇತೃತ್ವವು ಇದುವರೆಗೆ ತಿಳಿಸಿಲ್ಲ. ಮುಂದೆ ಪರಿಶೀಲನೆ ನಡೆಯಲಿದೆ ಎಂದು ಹೇಳಿದರು.