ಹೊಸ ದಿಗಂತ ವರದಿ, ಕಾಸರಗೋಡು:
ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆಗೆ ಸಂಬಂಧಿಸಿ ಮಂಜೇಶ್ವರ ಶಾಸಕರಾದ ಮುಸ್ಲಿಂಲೀಗ್ ನಾಯಕ, ಸಂಸ್ಥೆಯ ಚೆಯರ್ ಮೆನ್ ಎಂ.ಸಿ.ಖಮರುದ್ದೀನ್ ಮತ್ತು ಮುಸ್ಲಿಂಲೀಗ್ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಟಿ.ಕೆ.ಪೂಕೋಯ ತಂಗಳ್ ವಿರುದ್ಧ ಶುಕ್ರವಾರ ಮತ್ತೆ ಆರು ಕೇಸುಗಳನ್ನು ದಾಖಲಿಸಲಾಗಿದೆ. ಈ ಪೈಕಿ ಮೂರು ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಹಾಗೂ ಮೂರು ಚಂದೇರ ಪೊಲೀಸ್ ಠಾಣೆಯಲ್ಲಿ ಕೇಸುಗಳು ದಾಖಲಾಗಿವೆ.
ಚೆರ್ವತ್ತೂರು ಸುಬೈದಾ (5 ಲಕ್ಷ ರೂಪಾಯಿ), ಕಣ್ಣೂರು ಮಾಟುಮ್ಮಲ್ ಕಡವತ್ ಹೌಸ್ ನ ಹಾರಿಸ್ (9 ಲಕ್ಷ ರೂಪಾಯಿ), ಉದುಮ ಪಾರಾರದ ಅಬ್ದುಲ್ ಖಾದರ್ (17 ಲಕ್ಷ ರೂಪಾಯಿ) ಎಂಬವರು ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ.
ಅದೇ ರೀತಿ ಬೀರಿಚ್ಚೇರಿಯ ಆಸೀಸ್ (16 ಲಕ್ಷ ರೂಪಾಯಿ), ಪಡನ್ನದ ಸೈನಬಾ (6 ಲಕ್ಷ ರೂಪಾಯಿ), ಮಾಣಿಯಾಟ್ ನ ಟಿ.ವಿ.ಬಿ.ಸೈನಬಾ (3 ಲಕ್ಷ ರೂಪಾಯಿ) ಎಂಬವರ ದೂರಿನಂತೆ ಚಂದೇರ ಠಾಣಾ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಮಧ್ಯೆ ಜ್ಯುವೆಲ್ಲರಿ ಠೇವಣಿ ವಂಚನೆಗೆ ಸಂಬಂಧಿಸಿ ವಿವಿಧ ಠಾಣೆಗಳಲ್ಲಿ ದಾಖಲಾದ ಕೇಸುಗಳ ಸಂಖ್ಯೆ 100 ದಾಟಿರುವುದಾಗಿ ಪೊಲೀಸ್ ವರದಿ ತಿಳಿಸಿದೆ.
ಇನ್ನೊಂದೆಡೆ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಯಾದ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ರ ವಿರುದ್ಧ ಪುತ್ತಿಗೆಯಲ್ಲಿ ಸಿಪಿಎಂ ಕಾರ್ಯಕರ್ತರು ಕರಿಪತಾಕೆ ತೋರಿ ಪ್ರತಿಭಟಿಸಿದರು. ಪಂಚಾಯತ್ ವ್ಯಾಪ್ತಿಯ ಅನೋಡಿಪಳ್ಳ ಅಭಿವೃದ್ಧಿ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರು ಹಿಂತಿರುಗುತ್ತಿದ್ದಾಗ ಸಿಪಿಎಂ ಕಾರ್ಯಕರ್ತರು ಕರಿಪತಾಕೆ ತೋರಿ ಸಂಚಾರಕ್ಕೆ ತಡೆಯೊಡ್ಡಿದರು. ಈ ವೇಳೆ ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ಚದುರಿಸಿದರು. ಸಿಪಿಎಂ ಪುತ್ತಿಗೆ ಲೋಕಲ್ ಸಮಿತಿಯ ಸದಸ್ಯ ಸಂತೋಷ್ ಕುಮಾರ್, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಹಕೀಮ್ ಕುಂಬಳೆ ಮುಂತಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.