Sunday, June 26, 2022

Latest Posts

ಜ್ಯುವೆಲ್ಲರಿ ಸಂಸ್ಥೆ ಹೆಸರಲ್ಲಿ ಪಂಗನಾಮ: ಮಂಜೇಶ್ವರ ಶಾಸಕರ ವಿರುದ್ಧ ಮತ್ತೆ 5 ಕೇಸು ದಾಖಲು

ಕಾಸರಗೋಡು: ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಎಂ.ಸಿ.ಖಮರುದ್ದೀನ್ ಪ್ರಧಾನ ಆರೋಪಿಯಾಗಿರುವ ವಂಚನೆ ಪ್ರಕರಣಗಳ ಕುರಿತು ಸಮಗ್ರ ತನಿಖೆಗೆ ಕ್ರೈಮ್ ಬ್ರಾಂಚ್ ಚಾಲನೆ ನೀಡಿದ್ದು , ಇದೀಗ ಇನ್ನಷ್ಟು ಮಂದಿ ಶಾಸಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಉದುಮ ಪಳ್ಳಂ ಕುನ್ನಿಲ್ ನ ಮೊಹಮ್ಮದ್ ಎಂಬವರು ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ. 2007ರಲ್ಲಿ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಸಂಸ್ಥೆಯಲ್ಲಿ ತನ್ನನ್ನು ಪಾಲುದಾರನನ್ನಾಗಿ ಮಾಡುವುದಾಗಿ ತಿಳಿಸಿ 35 ಲಕ್ಷ ರೂಪಾಯಿ ಪಡೆದುಕೊಳ್ಳಲಾಗಿದೆ. ಬಳಿಕ ಪಾಲುದಾರನನ್ನಾಗಿ ಮಾಡಲಿಲ್ಲ. ಅಲ್ಲದೆ ಲಾಭದ ಪಾಲನ್ನಾಗಲಿ, ಹಣವನ್ನಾಗಲಿ ನೀಡದೆ ವಂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಅದೇ ರೀತಿ ಉದುಮ ಪರಿಸರದ ಮೊಹಮ್ಮದ್ ಶಾಫಿ, ಉದುಮ ಪಾಕ್ಕಾರ್ ನ ಅಬ್ದುಲ್ಲ ಕುಟ್ಟಿ , ಕೋಟಕುನ್ನುವಿನ ಕೆ.ಮೊಹಮ್ಮದ್ ಶಾಫಿ, ಎರೋಲ್ ನ ಹಸೈನಾರ್ ಮೊಯ್ದೀನ್ ಎಂಬವರೂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಉದುಮ ಪರಿಸರದ ಮೊಹಮ್ಮದ್ ಶಾಫಿಯಿಂದ 10 ಲಕ್ಷ ರೂ., ಉದುಮ ಪಾಕ್ಕಾರ್ ನ ಅಬ್ದುಲ್ಲ ಕುಟ್ಟಿಯಿಂದ 3 ಲಕ್ಷ ರೂ., ಕೋಟಕುನ್ನುವಿನ ಕೆ.ಮೊಹಮ್ಮದ್ ಶಾಫಿಯಿಂದ 15 ಲಕ್ಷ ರೂ., ಎರೋಲ್ ನ ಹಸೈನಾರ್ ಮೊಯ್ದೀನ್ ರಿಂದ 10 ಲಕ್ಷ ರೂ. ಹಣವನ್ನು ಮಂಜೇಶ್ವರ ಶಾಸಕರು ಮತ್ತು ಜ್ಯುವೆಲ್ಲರಿ ಸಂಸ್ಥೆಯ ಪ್ರಮುಖರು ಪಡೆದು ವಂಚಿಸಿದ್ದಾರೆಂದು ದೂರು ನೀಡಲಾಗಿದೆ.
ಇದೇ ವೇಳೆ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ರನ್ನು ಮುಖ್ಯ ಆರೋಪಿಯನ್ನಾಗಿಸಿ ಕಾಸರಗೋಡು ಪೊಲೀಸರು 5 ಕೇಸುಗಳನ್ನು ಹಾಗೂ ಚಂದೇರ ಪೊಲೀಸರು 11 ಕೇಸುಗಳನ್ನು ಈ ಮೊದಲೇ ದಾಖಲಿಸಿಕೊಂಡಿದ್ದರು. ಈ ಎಲ್ಲ ಪ್ರಕರಣಗಳ ಬಗ್ಗೆ ಕ್ರೈಮ್ ಬ್ರಾಂಚ್ ಡಿವೈಎಸ್ ಪಿ ಎ.ಸತೀಶ್ ಕುಮಾರ್ ಅವರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ. ಈ ಮಧ್ಯೆ ಚಂದೇರ ಪೊಲೀಸರು ದಾಖಲಿಸಿಕೊಂಡ ಪ್ರಕರಣಗಳ ಎಲ್ಲ ದಾಖಲೆಗಳನ್ನು ಒಂದೆರಡು ದಿನಗಳೊಳಗೆ ಪಡೆದು ಪರಿಶೀಲಿಸಲು ಕ್ರೈಮ್ ಬ್ರಾಂಚ್ ತನಿಖಾ ತಂಡವು ನಿರ್ಧರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss