ಕಾಸರಗೋಡು: ಜ್ಯುವೆಲ್ಲರಿ ಹೆಸರಿನಲ್ಲಿ ಹೂಡಿಕೆಯಾಗಿ ಸ್ವೀಕರಿಸಿದ ಹಣವನ್ನು ಮರು ಪಾವತಿಸದ ಆರೋಪದಂತೆ ಮುಸ್ಲಿಂಲೀಗ್ ಮುಖಂಡ, ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಮತ್ತು ಜ್ಯುವೆಲ್ಲರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಪೂಕೋಯ ತಂಗಳ್ ವಿರುದ್ಧ ಚಂದೇರಾ ಪೊಲೀಸರು ಕೇಸು ದಾಖಲಿಸಿದ್ದಾರೆ.
ಚೆರುವತ್ತೂರು ಕೇಂದ್ರವಾಗಿ ಕಾರ್ಯಾಚರಿಸುವ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಹಣ ಹೂಡಿದ್ದ ಕಾಡಂಕೋಟ್ಟ ಅಬ್ದುಲ್ ಶುಕೂರ್ (30 ಲಕ್ಷ ರೂ.), ಎಂ.ಟಿ.ಪಿ.ಸುಹರಾ (15 ಪವನ್ ಚಿನ್ನ ಹಾಗೂ 1 ಲಕ್ಷ ರೂ.) ಮತ್ತು ವಲಿಯಪರಂಬ ಇ.ಕೆ.ಆರೀಫ್ (3 ಲಕ್ಷ ರೂ.) ಎಂಬವರು ನೀಡಿದ ದೂರಿನಂತೆ ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿ ಅಧ್ಯಕ್ಷ ಹಾಗೂ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಪೂಕೋಯ ತಂಗಳ್ ವಿರುದ್ಧ ಕಂಪನಿಯ ಸೋಗಿನಲ್ಲಿ ಖಾಸಗಿ ಹೂಡಿಕೆ ಸ್ವೀಕಾರ ಮತ್ತು ವಂಚನೆ ಮತ್ತಿತರ ಆರೋಪದಂತೆ ಪ್ರಕರಣ ದಾಖಲಿಸಲಾಗಿದೆ.
ಫ್ಯಾಷನ್ ಗೋಲ್ಡ್ ನ ಚೆರುವತ್ತೂರು, ಪಯ್ಯನ್ನೂರು ಮತ್ತು ಕಾಸರಗೋಡು ಶಾಖೆಗಳನ್ನು ಕಳೆದ ಜನವರಿಯಲ್ಲಿ ಮುಚ್ಚಲಾಗಿದೆ. ಕಂಪೆನಿಯ ಆಸ್ತಿಯನ್ನೂ ಮಾರಲಾಗಿದೆ. ಕಳೆದ ವರ್ಷ ಆಗಸ್ಟ್ನಿಂದ ಹೂಡಿಕೆದಾರರಿಗೆ ಲಾಭಾಂಶ ಪಾವತಿಸಿಲ್ಲ. ಹೂಡಿದ ಹಣ ಹಿಂತಿರುಗಿ ಲಭಿಸದು ಎಂಬುದು ಖಾತರಿಯಾದಾಗ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಮೂರು ಆಭರಣ ಮಳಿಗೆ ಹೆಸರಿನಲ್ಲಿ 150 ಕೋಟಿ ರೂ.ಗಳ ಹೂಡಿಕೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಮಧ್ಯೆ ಸುಮಾರು 800ರಷ್ಟು ಹೂಡಿಕೆದಾರರನ್ನು ಹೊಂದಿದ್ದ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಹಣವನ್ನು ಠೇವಣಿಯಾಗಿ ಇರಿಸಿದ್ದ ಮದರಸಾ ಶಿಕ್ಷಕ ಸೇರಿದಂತೆ ಏಳು ಮಂದಿ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಕಾಞಂಗಾಡು ಸಿ.ಖಾಲಿದ್ (78 ಲಕ್ಷ ರೂ.), ಮದರಸಾ ಶಿಕ್ಷಕ ಪೆರಿಯಾಟ್ಟಡ್ಕಂ ನಿವಾಸಿ ಜಮಾಲುದ್ದೀನ್ (35 ಲಕ್ಷ ರೂ.), ತಳಿಪರಂಬ ನಿವಾಸಿ ಎಂ.ಟಿ.ಪಿ.ಅಬ್ದುಲ್ ಬಶೀರ್ (5 ಲಕ್ಷ ರೂ.), ಪಡನ್ನ ವಡಕ್ಕೇಪುರಂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ತಳಿಪರಂಬ ಎನ್.ಪಿ.ನಸೀಮಾ (8 ಲಕ್ಷ ರೂ.), ಆಯಿಟ್ಟಿ ಕೆ.ಕೆ.ಸೈನುದ್ದೀನ್ (15 ಲಕ್ಷ ರೂ.) ಎಂಬವರು ಈ ಹಿಂದೆಯೇ ದೂರು ನೀಡಿದ್ದರು. ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿ ಕಾರ್ಯಾಚರಿಸುತ್ತಿದ್ದ ಕಾಸರಗೋಡು ಹಾಗೂ ಪಯ್ಯನ್ನೂರು ಶಾಖೆಗಳ ಭೂಮಿ ಮತ್ತು ಕಟ್ಟಡವನ್ನು ಅಲ್ಲದೆ ಬೆಂಗಳೂರಿನ ಆಸ್ತಿಯನ್ನು ಅಧ್ಯಕ್ಷರು ಮತ್ತು ಅವರ ತಂಡವು ಈ ಮೊದಲೇ ಮಾರಾಟ ಮಾಡಿದೆ.
ಇದೇ ವೇಳೆ ವಿವಾದಿತ ತೃಕ್ಕರೀಪುರದ ವಕ್ಫ್ ಭೂ ವ್ಯವಹಾರದಲ್ಲೂ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಆರೋಪಿಯಾಗಿದ್ದಾರೆ ಎನ್ನಲಾಗಿದೆ. ಜಾಮಿಯಾ ಸಅದಿಯಾ ಇಸ್ಲಾಮಿಯಾ ಅಗತಿ ಕೇಂದ್ರದ ಭೂಮಿಯನ್ನು ಮಂಜೇಶ್ವರ ಶಾಸಕರ ನೇತೃತ್ವದಲ್ಲಿ ಖಾಸಗಿ ಕಾಲೇಜು ಟ್ರಸ್ಟ್ ರಹಸ್ಯವಾಗಿ ನೋಂದಾಯಿಸಿ ಸ್ವಾಧೀನಪಡಿಸಿಕೊಂಡಿತ್ತು ಎಂದು ತಿಳಿದುಬಂದಿದೆ. ವಿವಾದ ಭುಗಿಲೆದ್ದಾಗ ಭೂಮಿಯನ್ನು ಹಿಂತಿರುಗಿಸಲಾಗಿತ್ತು. ಅಲ್ಲದೆ
ವಕ್ಫ್ ಮಂಡಳಿಯು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಪೊಲೀಸರಿಗೆ ದೂರು ಸಲ್ಲಿಸಿದೆ.