Friday, July 1, 2022

Latest Posts

ಜ.ತಿಮ್ಮಯ್ಯ ಮ್ಯೂಸಿಯಂಗೆ ಸಾವಿರಕ್ಕೂ ಅಧಿಕ ಪ್ರವಾಸಿಗರ ಭೇಟಿ: ಸೇನಾಭಿಮಾನಿಗಳ ಆಕರ್ಷಣೆಯ ಕೇಂದ್ರ

ಹೊಸದಿಗಂತ ವರದಿ, ಕೊಡಗು:

ಮಡಿಕೇರಿಯಲ್ಲಿ ಕಳೆದ ಶನಿವಾರ (ಫೆ.6)ವಷ್ಟೇ ರಾಷ್ಟ್ರಪತಿಗಳಿಂದ ಲೋಕಾರ್ಪಣೆಗೊಂಡ ವೀರ ಸೇನಾನಿ ಜನರಲ್ ತಿಮ್ಮಯ್ಯ ಮ್ಯೂಸಿಯಂನ್ನು ವೀಕ್ಷಿಸಲು ರಾಜ್ಯ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಹಾಗೂ ಸೇನಾಭಿಮಾನಿಗಳು ಆಗಮಿಸುತ್ತಿದ್ದಾರೆ.

ತಿಮ್ಮಯ್ಯ ಅವರು ಜನಿಸಿದ ಸನ್ನಿಸೈಡ್ ಹೆಸರಿನ ಮನೆ ಇಂದು ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದ್ದು, ಅಪ್ರತಿಮ ಸೇನಾಧಿಕಾರಿಯ ಸೇನಾ ಸೇವೆಯ ಮೆಲುಕು ನೋಡುಗರ ಗಮನ ಸೆಳೆಯುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ.

ಶಿಷ್ಟಾಚಾರ ಮತ್ತು ಭದ್ರತೆಯ ದೃಷ್ಟಿಯಿಂದ ಮ್ಯೂಸಿಯಂ ಲೋಕಾರ್ಪಣೆಯ ಕ್ಷಣವನ್ನು ಜಿಲ್ಲೆಯ ಜನರಿಂದಲೂ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಸೇನಾ ನಾಡು ಕೊಡಗಿನ ಹಿರಿಮೆಗೆ ಮತ್ತೊಂದು ಹೆಸರಾದ ಜನರಲ್ ತಿಮ್ಮಯ್ಯ ಅವರ ಮನೆ ಮ್ಯೂಸಿಯಂ ಆಗಿ ಪರಿವರ್ತನೆಯಾದ ನಂತರದ ಆಕರ್ಷಣೆಯನ್ನು ಕಣ್ತುಂಬಿಕೊಳ್ಳುವ ಕುತೂಹಲ ಇಲ್ಲಿನ ಜನರಲ್ಲಿತ್ತು. ಇದೀಗ ಕೊಡಗು ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರವಾಸಿಗರ ದಂಡು ಮಡಿಕೇರಿಯ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನ, ಅರಸರ ಕೋಟೆ, ಶ್ರೀ ಓಂಕಾರೇಶ್ವರ ದೇವಾಲಯದ ಜೊತೆ ಜೊತೆಯಲ್ಲೇ ಜನರಲ್ ತಿಮ್ಮಯ್ಯ ಮ್ಯೂಸಿಯಂಗೂ ಭೇಟಿ ನೀಡುತ್ತಿದ್ದಾರೆ. ತಿಮ್ಮಯ್ಯ ಅವರ ಬಾಲ್ಯ, ಯೌವ್ವನ, ಬದುಕಿನ ಪಯಣ, ಸಾಧನೆ, ಜೀವನ ಶೈಲಿ, ಶಿಸ್ತು, ಕೊಡಗಿನ ಸಂಸ್ಕೃತಿ ಇವುಗಳೆಲ್ಲವೂ ಒಂದೇ ಸೂರಿನಡಿ ಮನಸೂರೆಗೊಳ್ಳುತ್ತಿದೆ.

ಮ್ಯೂಸಿಯಂ ಆವರಣದಲ್ಲಿರುವ ಟಿ.55 ಯುದ್ಧ ಟ್ಯಾಂಕರ್, ಮಿಗ್ 21 ಯುದ್ಧ ವಿಮಾನ, ಇಂಡೋ-ಪಾಕ್, ಇಂಡೋ-ಚೈನಾ ಯುದ್ಧಗಳ ಸಂದರ್ಭದ ಟ್ಯಾಂಕರ್, ಯುದ್ಧ ವಿಮಾನದ ಎದುರು ಸೆಲ್ಫಿ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.

1947ರ ನಂತರದ ಯುದ್ಧ, ಸೈನಿಕ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಕೊಡಗಿನ ವೀರ ಯೋಧರ ತ್ಯಾಗ ಹಾಗೂ ಬಲಿದಾನದ ಸ್ಮರಣಾರ್ಥ ಅಮರ್ ಜವಾನ್ ಯುದ್ಧ ಸ್ಮಾರಕವನ್ನೂ ಇಲ್ಲಿ ನಿರ್ಮಿಸಲಾಗಿದ್ದು, ಭೇಟಿ ನೀಡುತ್ತಿರುವವರು ಹುತಾತ್ಮರಿಗೆ ಗೌರವ ಅರ್ಪಿಸುತ್ತಿರುವ ದೃಶ್ಯ ಇಲ್ಲಿನ ಘನತೆಯನ್ನು ಹೆಚ್ಚಿಸಿದೆ.

ಮ್ಯೂಸಿಯಂನ ಒಳಗೆ ಜನರಲ್ ತಿಮ್ಮಯ್ಯ ಅವರ ಬಗೆಗಿನ ಮಾಹಿತಿ, ಅವರ ಬದುಕಿನ ಬರಹವನ್ನು ಓದಿದ ಜನರು ಪುಳಕಿತರಾಗುತ್ತಿದ್ದಾರೆ. ಜನರಲ್ ತಿಮ್ಮಯ್ಯ ಅವರ ಯುದ್ಧ ಭೂಮಿಯ ಚಿತ್ರಗಳು, ಕುಮಾಂವೋ ರೆಜಿಮೆಂಟ್‌ನ ಯಶೋಗಾಥೆ, ಪರಮ್ ವೀರ್ ಚಕ್ರ ಪಡೆದ ರೆಜಿಮೆಂಟ್‌ನ ಸೈನಿಕರ ವಿವರ ಮತ್ತು ಬರಹ ಸಹಿತದ ಚಿತ್ರಗಳು ಭಾರತೀಯ ಸೈನ್ಯದ ಸಾಧನೆಗಳನ್ನು ಕಟ್ಟಿಕೊಡುತ್ತಿದೆ. ಜನರಲ್ ತಿಮ್ಮಯ್ಯ ಅವರ ಕೋಣೆ, ಸಮವಸ್ತ್ರ, ಕೊಡಗಿನ ಸಾಂಪ್ರದಾಯಿಕ ಉಡುಗೆ, ಆಭರಣಗಳು ನೋಡುಗರ ಕುತೂಹಲವನ್ನು ಹೆಚ್ಚಿಸಿದೆ.

ಶೀಘ್ರ ಪ್ರವೇಶ ಶುಲ್ಕ ನಿಗದಿ: ಮ್ಯೂಸಿಯಂಗೆ ಪ್ರವೇಶ ಶುಲ್ಕವನ್ನು ಇಲ್ಲಿಯವರೆಗೆ ನಿಗದಿಪಡಿಸಿಲ್ಲ. ಭೇಟಿ ನೀಡುತ್ತಿರುವವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದು ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸ್ಮಾರಕ ಭವನ ಸಮಿತಿ ಸಭೆಯಲ್ಲಿ ಚರ್ಚಿಸಿ ಸದ್ಯದಲ್ಲೇ ಪ್ರವೇಶ ಶುಲ್ಕ ನಿಗದಿಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ದರ್ಶನ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಯಿoದ ಸಂಜೆ 6 ಗಂಟೆಯವರೆಗೆ ಮ್ಯೂಸಿಯಂ ವೀಕ್ಷಣೆಗೆ ಸಮಯ ನಿಗದಿಪಡಿಸಲಾಗಿದೆ. ಸ್ಮಾರಕದ ಅಭಿವೃದ್ಧಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ತಡೆಗೋಡೆ ನಿರ್ಮಾಣ ಕಾರ್ಯ ನಡೆಯಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss