ಹೊಸ ದಿಗಂತ ವರದಿ, ಮಂಡ್ಯ :
ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲು ಅವರು ಜ. 12ರಂದು ಮಂಡ್ಯ ನಗರಕ್ಕೆ ಭೇಟಿ ನೀಡಿ ಜನಸೇವಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಬಾಲಗಂಗಾಧರನಾಥ ಸ್ವಾಮೀಜಿ ಸಮುದಾಯ ಭವನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುವ ಅವರು, ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರನ್ನು ಅಭಿನಂದಿಸುವರು. ಪರಾಜಿತ ಅಭ್ಯರ್ಥಿಗಳಿಗೆ ಸಾಂತ್ವನ ಹೇಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಮಾರು 850ಕ್ಕೂ ಹೆಚ್ಚು ಮಂದಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ಆಯ್ಕೆಯಾಗಿದ್ದು, ಅಂದು ನಡೆಯುವ ಸಮಾರಂಭದಲ್ಲಿ ಸದಸ್ಯರನ್ನು ಅಭಿನಂದಿಸಲಿದ್ದಾರೆ. ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವರು ಎಂದು ತಿಳಿಸಿದ್ದಾರೆ.
ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಕಂದಾಯ ಸಚಿವ ಆರ್. ಅಶೋಕ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಕೆ.ಸಿ. ನಾರಾಯಣಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಸಮಾರಂಭದಲ್ಲಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.