Tuesday, August 9, 2022

Latest Posts

ಜ. 15ರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ಡಿಪ್ಲೊಮಾ ಆಫ್‌ಲೈನ್‌ ತರಗತಿಗಳು ಶುರು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜ. 15ರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ತರಗತಿಗಳ ಎಲ್ಲ ವರ್ಷಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಆರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಸಿಎಂ, ಅಂತಿಮ ವರ್ಷದ ಆಫ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಕೂಡ ತಮಗೂ ನೇರ ತರಗತಿಗಳನ್ನು ಆರಂಭಿಸುವಂತೆ ಒತ್ತಾಯ ಮಾಡುತ್ತಿದ್ದರು. ಈ ಹಿನ್ನೆಲೆ ಈ ತಿಂಗಳಿನಿಂದಲೇ ತರಗತಿಗಳನ್ನು ಆರಂಭ ಮಾಡುತ್ತಿದ್ದೇವೆ ಎಂದರು.
ಇನ್ನು ಇದೇ ದಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ ಹಾಗೂ ಮೂರನೇ ವರ್ಷದ ಆಫ್‌ಲೈನ್‌ ತರಗತಿಗಳು ಕೂಡ ಶುರುವಾಗುತ್ತಿವೆ.
ಕೋವಿಡ್‌ ಮಾರ್ಗಸೂಚಿಯಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕಾಲೇಜುಗಳಲ್ಲಿ ಕೋವಿಡ್‌ ತಪಾಸಣೆ, ಸ್ಯಾನಿಟೈಸ್ ವ್ಯವಸ್ಥೆ, ದೈಹಿಕ ಅಂತರ ಪಾಲನೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳು ಇರಲಿವೆ ಎಂದರು.
ಇನ್ನು ಎನ್ ಸಿಸಿ ಮತ್ತು ‌ಎನ್‌ಎಸ್‌ಎಸ್ ತರಬೇತಿಗೂ ಅವಕಾಶ ನೀಡಲಾಗಿದೆ. ಎನ್ ಸಿಸಿ ಕೂಡ ಪರೀಕ್ಷೆ ಗಳನ್ನು ಆಯೋಜಿಸಬೇಕಾಗಿದ್ದು, ಇದಕ್ಕಾಗಿ ಅಲ್ಪಾವಧಿಯ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಬಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಮೂರು ದಿನಗಳ ಹಾಗೂ ಸಿ- ಸರ್ಟಿಫಿಕೇಟ್ ಪರೀಕ್ಷೆ ಗೆ ಐದು ದಿನಗಳ ಶಿಬಿರ ‌ನಡೆಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಡಿಸಿಎಂ ಹೇಳಿದರು.
ಅಂತಿಮವಾಗಿ, ಏಕಕಾಲಕ್ಕೆ ಎಲ್ಲೆಡೆ ಆಫ್‌ಲೈನ್‌ನಲ್ಲಿಯೇ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಸರಕಾರಿ-ಖಾಸಗಿ ವಲಯದ ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಆದಷ್ಟು ಬೇಗ ಪರೀಕ್ಷೆ ದಿನದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss