Thursday, July 7, 2022

Latest Posts

ಜ.15 ರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಸಮಸ್ತ ಹಿಂದು ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ ಸಂಕಲ್ಪ ಮಾಡಿರುವ ವಿಶ್ವ ಹಿಂದು ಪರಿಷದ್ ಜ.15 ರಿಂದ ಫೆ.5ರವರೆಗೆ ಜಿಲ್ಲೆಯಲ್ಲಿ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಸಲಿದೆ.
ಅಭಿಯಾನ ಸಮಿತಿಯ ಜಿಲ್ಲಾ ಪ್ರಮುಖ ಬಿ.ಮಲ್ಲಿಕಾರ್ಜುನ ರಾವ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯ 1814 ಗ್ರಾಮಗಳ ಸುಮಾರು 2.25 ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
10 ರೂ.ನಿಂದ 100 ಹಾಗೂ 1000 ರೂ.ವರೆಗೆ ಮುದ್ರಿತ ಕೂಪನ್‍ಗಳ ಮೂಲಕ ಧನಸಂಗ್ರಹ ನಡೆಯಲಿದ್ದು, 2,000 ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ್ದ ಭಕ್ತರಿಗೆ ರಸೀದಿ ನೀಡಲಾಗುವುದು. ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯ್ತಿಯ ಸೌಲಭ್ಯ ಪಡೆಯಬಹುದು ಎಂದು ಅವರು ತಿಳಿಸಿದರು.
ಐವರು ಕಾರ್ಯಕರ್ತರನ್ನು ಒಳಗೊಂಡ ತಂಡ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದು, ಸಂಗ್ರಹವಾದ ಹಣವನ್ನು 48 ಗಂಟೆಯೊಳಗೆ ತೀರ್ಥಕ್ಷೇತ್ರ ಟ್ರಸ್ಟ್‍ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ತಂಡದಲ್ಲಿ ಸಂಗ್ರಹವಾಗುವ ಹಣವನ್ನು ಜಮೆ ಮಾಡುವ ಕಾರ್ಯಕರ್ತರಿಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬ್ಯಾಂಕ್ ಆಫ್ ಬರೋಡಾ ಇಲ್ಲವೆ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ನೋಂದಣಿ ಸಂಖ್ಯೆ ನೀಡಲಾಗಿದ್ದು, ಹಣ ಪಾವತಿ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿರಲಿದೆ ಎಂದು ತಿಳಿಸಿದರು.
ಚಿತ್ರರಂಗದ ಹೆಸರಾಂತ ಡಾ.ಚಂದ್ರಪ್ರಕಾಶ್ ದ್ವಿವೇದಿ ರಾಮಮಂದಿರದ ಇತಿಹಾಸ ಹಾಗೂ ಈ ಅಭಿಯಾನದ ಸಾಕ್ಷ್ಯಚಿತ್ರವನ್ನು ರಚಿಸಿದ್ದು, ಖ್ಯಾತ ಸಿನಿಮಾ ನಟ ಅಕ್ಷಯ್‍ಕುಮಾರ್ ಅವರ ಅಭಿಯಾನ ಕುರಿತ ನಿವೇದನೆ ಒಳಗೊಂಡಿರುತ್ತದೆ. ದೇಶದ ಮೂಲೆ ಮೂಲೆಗಳಿಗೂ ಅಭಿಯಾನದ ಮಾಹಿತಿಯನ್ನು ಶ್ರಾವ್ಯ ಹಾಗೂ ದೃಶ್ಯ ಮಾಧ್ಯಮದ ಮೂಲಕ ತಲುಪಿಸಲಾಗುವುದು ಎಂದರು.
ಈ ಅಭಿಯಾನದಲ್ಲಿ ರಾಜ್ಯಾದ್ಯಂತ 27,500 ಹಳ್ಳಿಗಳ ಸುಮಾರು 90 ಲಕ್ಷ ಭಕ್ತರನ್ನು ತಲುಪಿ ಧನ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀ ರಾಮಜನ್ಮ ಭೂಮಿ ಟ್ರಸ್ಟ್‍ನ ವಿಶ್ವಸ್ಥರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.
ಈ ಅಭಿಯಾನ ಹಾಗೂ ಮಂದಿರ ನಿರ್ಮಾಣ ಕಾರ್ಯವೆಂದರೆ ಇದು ಜಾಗೃತ ಹಿಂದೂ ಶಕ್ತಿಯ ಸಂಕೇತ. ಸಮಾಜವನ್ನು ಮೇಲು-ಕೀಳು ಎಂಬ ಭಾವನೆಗಳಿಂದ ಮುಕ್ತಗೊಳಿಸುವ ಬಡತನ, ಆರೋಗ್ಯ, ಶಿಕ್ಷಣ, ಕೌಶಲ್ಯದ ನ್ಯೂನತೆಗಳನ್ನು ನಿರ್ಮೂಲನೆ ಮಾಡುವ, ಮಹಿಳೆಯರ ಘನತೆ ಮರು ಸ್ಥಾಪಿಸುವ, ಭಯೋತ್ಪಾದನೆ ನಿರ್ಮೂಲನೆ ಮಾಡುವ ವೇದದ ಗುರಿಯನ್ನು ಹೊಂದಿದೆ ಎಂದು ಹೇಳಿದರು.
2024ರೊಳಗೆ ಶ್ರೀ ರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿ ದೇವರ ದರ್ಶನದ ವ್ಯವಸ್ಥೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಂಪೂರ್ಣ ಕಲ್ಲಿನ ಬ್ಲಾಕ್‍ಗಳ ನೆರವಿನಲ್ಲಿ 2.7 ಎಕರೆ ವಿಸ್ತೀರ್ಣದ 54000 ಚದರ ಅಡಿಯ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಈ ಮಂದಿರ 360 ಅಡಿ ಉದ್ದ ಹಾಗೂ 235 ಅಗಲದಲ್ಲಿರಲಿದ್ದು, ಮೂರು ಅಂತಸ್ತು ಹಾಗೂ 5 ಮಂಟಪಗಳಿರುತ್ತವೆ. ನೆಲ ಮಾಳಿಗೆಯಲ್ಲಿ 160, ಮೊದಲನೆಯ ಮಹಡಿಯಲ್ಲಿ 132 ಹಾಗೂ ಎರಡನೇಯ ಮಹಡಿಯಲ್ಲಿ 74 ಕಂಬಗಳಿರಲಿವೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಸ್ಥಳ, ಆಂಪಿ ಥಿಯೇಟರ್, ಧರ್ಮಶಾಲೆ, ಪ್ರದರ್ಶನಾಲಯ, ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿದೆ ಎಂದರು.
ಲಾರ್ಸನ್ ಅಂಡ್ ಟ್ಯೂಬ್ರೋ ಸಂಸ್ಥೆ ಶ್ರೀ ರಾಮ ಮಂದಿರ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಂದಿರ ನಿರ್ಮಾಣ ಕಾರ್ಯಕ್ಕೆ ತನ್ನ ಅಭಿಯಂತರರನ್ನು ನಿಯೋಜಿಸಲಿದೆ. ಐಐಟಿಯ ಮುಂಬೈ, ದೆಹಲಿ, ಚೆನ್ನೈ, ಗುವಾಹಟಿ, ಸಿಬಿಆರ್‍ಐ ರೂರ್ಕಿ ಹಾಗೂ ಲಾರ್ಸನ್ ಅಂಡ್ ಟ್ಯೂಬ್ರೋ ಸಂಸ್ಥೆ ಮಂದಿರ ಅಡಿಪಾಯದ ನೀಲನಕ್ಷೆಯ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಆರ್‍ಎಸ್‍ಎಸ್‍ನ ಸಂಪರ್ಕ ಪ್ರಮುಖ್ ಪ್ರಸನ್ನಕುಮಾರ್ ಕಿಬ್ಳಿ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss