ಹೊಸ ದಿಗಂತ ವರದಿ ಮೈಸೂರು:
ಮೈಸೂರಿನ ಜೆಪಿ ನಗರದ ಅಕ್ಕಮಹಾದೇವಿ ರಸ್ತೆಯ ವೃತ್ತದಲ್ಲಿ ನಿರ್ಮಾಣಗೊಂಡಿರುವ ಅಕ್ಕ ಮಹಾದೇವಿ ಅವರ ಪ್ರತಿಮೆ ಜ.23 ರಂದು ಅನಾವರಣಗೊಳ್ಳಲಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ, ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ಗುರುವಾರ ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಕ್ಕಮಹಾದೇವಿ ಪುತ್ಥಳಿಯ ಪರಿಶೀಲನೆ ಹಾಗೂ ಶಾಸಕರ ಅನುದಾನದ ವತಿಯಿಂದ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ರಸ್ತೆ ಮತ್ತು ವಿವಿಧ ಕಾಮಗರಿಗಳನ್ನು ವೀಕ್ಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿರುವ ಅಕ್ಕಮಹಾದೇವಿ ಅವರು, ಇಡೀ ಸಮಾಜಕ್ಕೆ, ಪ್ರಪಂಚಕ್ಕೆ ಸೇರಿದ ಆಸ್ತಿ, ಮನುಷ್ಯನ ಮೌಲ್ಯವನ್ನು ಅರ್ಥಮಾಡಿಕೊಂಡು, ಹೇಗೆ ಜೀವನವನ್ನು ಸಾರ್ಥಕಗೊಳಿಸಬೇಕು ಎನ್ನುವ ದೊಡ್ಡ ಚಿಂತನೆಯನ್ನು ಹಾಗೂ ನಾವೆಲ್ಲಾ ಒಂದೇ ಎಂದು ಸಾರಿದ ಅಕ್ಕನನ್ನು ನಾವೆಲ್ಲ ಸುಲಭವಾಗಿ ಅರ್ಥೈಸುವುದು ಕ್ಲಿಷ್ಟಕರವಾದ ಸಂಗತಿ. ಅವರ ಪುತ್ಥಳಿಯ ಜೊತೆಗೆ , ಅವರ ಜೀವನದಲ್ಲಿ ನಡೆದುಬಂದ ಹಾದಿಯನ್ನು ಇಲ್ಲಿ ಹಾಕುವ ಯೋಚನೆ ಇದೆ. ಈ ಸ್ಥಳ ದೊಡ್ಡ ಆಧ್ಯಾತ್ಮಿಕ ಸ್ಥಳವಾಗಿ ಹೊರಹೊಮ್ಮುತ್ತದೆ ಎಂದು ತಿಳಿಸಿದರು.
ಜ.23 ಕ್ಕೆ ಮುಖ್ಯಮಂತ್ರಿಗಳು ಬರುತ್ತಿರುವುದರಿಂದ ಪೊಲೀಸ್, ಟ್ರಾಫಿಕ್, ವೈದ್ಯಕೀಯ ಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಯಾವ ಕೆಲಸಗಳು ನೆರವೇರಬೇಕೋ ಅದನ್ನು ಕೂಡಲೇ ನೆರವೇರಿಸಬೇಕೆಂದು ಸೂಚನೆ ನೀಡಿದ್ದೇವೆ. ಎಂದು ಹೇಳಿದರು.
ಈ ವೇಳೆ ನಗರಪಾಲಿಕೆಯ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಜೆ.ಪಿ ನಗರದ ಶರಣ ವೇದಿಕೆಯ ಅಧ್ಯಕ್ಷ ಎಸ್ . ಪುಟ್ಟರಾಜಪ್ಪ, ಉಪಾಧ್ಯಕ್ಷ ಎಸ್.ಎಂ.ಶಿವಪ್ರಕಾಶ್, ಕಾರ್ಯದರ್ಶಿ ಜೆ.ನಾಗೇಂದ್ರ ಕುಮಾರ್, ಸಹಕಾರ್ಯದರ್ಶಿ ಬಿ . ಮಹದೇವಸ್ವಾಮಿ, ಖಜಾಂಚಿ ಯು.ಎಸ್.ಸದಾಶಿವ, ಸಂಚಾಲಕ ಎಸ್.ನಂದೀಶ್, ನಿರ್ದೆಶಕರುಗಳಾದ ಪ್ರೊ . ಕೆ.ಜಿ. ಮಹದೇವಸ್ವಾಮಿ ಗುರುಬಸಪ್ಪ, ಎಸ್.ಪರಮೇಶ್ವರಪ್ಪ,ಬಿ.ಎನ್.ಸುಧಾಕರ್,ಸತ್ಯೇಂದ್ರ ಮೂರ್ತಿ,ಟಿ.ಎಸ್.ಸ್ವಾಮಿನಾಥನ್ ಮತ್ತಿತರರು ಹಾಜರಿದ್ದರು.