ಹೊಸ ದಿಗಂತ ವರದಿ ಶಿವಮೊಗ್ಗ:
ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜ.26 ರಂದು ಜನ ಗಣರಾಜ್ಯೋತ್ಸವ ಪೆರೇಡ್ ನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಎ ಚ್.ಆರ್. ಬಸವರಾಜಪ್ಪ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘ, ಕರ್ನಾಟಕ ಜನಶಕ್ತಿ, ದಲಿತ ಸಂಘರ್ಷ ಸಮಿತಿ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಐಕ್ಯ ಹೋರಾಟ ನಡೆಯಲಿದೆ. ಕಿಸಾನ್ ರೈತ ಮೋರ್ಚಾ 59 ದಿನಗಳಿಂದ ಹೋರಾಟ ಮಾಡುತ್ತಿದ್ದು, 10 ದಿನ ಮಾತುಕಥೆ ನಡೆಸಿದರೂ ಫಲಪ್ರದವಾಗಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಇನ್ನಷ್ಟು ಬಿಸಿ ಮುಟ್ಟಿಸುವ ಸಲುವಾಗಿ ಈ ಹೋರಾಟ ನಡೆಸಲಾಗುತ್ತದೆ ಎಂದರು.
ಪ್ರತೀ ಜಿಲ್ಲೆಯಿಂದ ಕನಿಷ್ಠ ಒಂದು ಸಾವಿರ ರೈತರು ತೆರಳಲಿದ್ದಾರೆ. ಶಿವಮೊಗ್ಗದಿಂದಲೂ 100 ವಾಹನಗಳಲ್ಲಿ ಸಾವಿರ ರೈತರು ತುಮಕೂರು ನೈಸ್ ರಸ್ತೆ ಜಂಕ್ಷನ್ಗೆ ಹೋಗಿ ಅಲ್ಲಿಂದ ಫ್ರೀಡಂ ಪಾರ್ಕ್ಗೆ ತೆರಳಲಾಗುತ್ತದೆ. ರಾಜ್ಯದ ನಾಲ್ಕೂ ಕಡೆಗಳಿಂದ ರೈತರು ಆಗಮಿಸಿ ಫ್ರೀಡಂ ಪಾರ್ಕ್ನಲ್ಲಿ ಸಮಾವೇಶಗೊಳ್ಳಲಾಗುತ್ತದೆ ಎಂದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ಕಾಯಿದೆಗಳನ್ನು ಕೈ ಬಿಡಬೇಕು. ರೈತರ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಅರ್ಜಿ ಹಾಕಿ ಕಾಯುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ತ ನೀಡಬೇಕು. ಗ್ರಾಮೀಣಾಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬರ ಮತ್ತು ನೆರೆ ಪೀಡಿತರಿಗೆ ತಕ್ಷಣ ಪರಿಹಾರ ನೀಡಬೇಕು. ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಮತ್ತು ವೇತನ ಭದ್ರತೆ ನೀಡಬೇಕೆಂದು ಆಗ್ರಹಿಸಲಾಗುತ್ತದೆ ಎಂದರು.