ಹೊಸ ದಿಗಂತ ವರದಿ, ಬೀದರ:
ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣ ಹಿನ್ನೆಲೆಯಲ್ಲಿ ಜಿಲ್ಲೆಯ ಬಸವಕಲ್ಯಾಣಕ್ಕೆ ಜನವರಿ.6 ರಂದು ಸಿಎಂ ಯಡಿಯೂರಪ್ಪನವರು ಆಗಮಿಸಲಿದ್ದಾರೆ ಎಂದು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 6 ರಂದು ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆಯು ರಾಜ್ಯದ ನೆಚ್ಚಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ನೆರವೇರಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಅನುಭವ ಮಂಟಪ ನಿರ್ಮಾಣಕ್ಕೆ 600 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ವಿಶ್ವದ ಮೊದಲ ಸಂಸತ್ ಅನುಭವ ಮಂಟಪಕ್ಕೆ ಪುನರ ನಿರ್ಮಿಸಿ ವಿಶ್ವ ವಿಖ್ಯಾತ ಆಗಬೇಕೆಂದು ನಮ್ಮ ಸಂಕಲ್ಪ ಇತ್ತು. ಪೂಜ್ಯ ಲಿಂ. ಡಾ.ಚನ್ನಬಸವಪಟ್ಟದ್ದೇವರ ಸಂಕಲ್ಪದಂತೆ ಅನುಭವ ಮಂಟಪ ನಿರ್ಮಾಣವಾಗಲಿದೆ ಎಂದರು.
ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ನುಡಿದಂತೆ ನಡೆಯುತ್ತಾರೆ. 180 ಅಡಿ ಎತ್ತರದ ಅನುಭವ ಮಂಟಪ ಕಟ್ಟಡದ ನಿರ್ಮಾಣ ಕಾರ್ಯ ನಮ್ಮ ಬಿಜೆಪಿ ಸರ್ಕಾರದ ಅವಧಿ ಮುಗಿಯುವುದರ ಒಳಗೆ ನಿರ್ಮಾಣ ಮಾಡುತ್ತೇವೆ. ಬಿಜೆಪಿ 2 ವರ್ಷ ಆಡಳಿತದಲ್ಲಿ ಇರುತ್ತದೆ 2 ವರ್ಷದೊಳಗೆ ಕಾಮಗಾರಿ ಮುಗಿಸುತ್ತೇವೆ. ಇಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಸಂಸತ್ ಗೆ ಸಮಾನವಿರುವ ಪವಿತ್ರ ಸ್ಥಳ ಎಂದು ಸಚಿವ ಪ್ರಭು ಚೌಹಾಣ್ ಹೇಳಿದರು.