Wednesday, August 10, 2022

Latest Posts

ಝೂಸ್ ಆಫ್ ಕರ್ನಾಟಕ ಮೊಬೈಲ್ ಆಪ್ ಬಿಡುಗಡೆ; ಮೃಗಾಲಯಗಳ ಸಮಸ್ಯೆ ಬಗೆಹರಿಸಲು ಪ್ರಯತ್ನ: ಸಚಿವ ಆನಂದ್‌ಸಿoಗ್

ಮೈಸೂರು: ಕರ್ನಾಟಕ ಮೃಗಾಲಯ ಪ್ರಾಧಿಕಾರ ರೂಪಿಸಿರುವ ಝೂಸ್ ಆಫ್ ಕರ್ನಾಟಕ ಮೊಬೈಲ್ ಆಪ್‌ನ್ನು ವಿಶ್ವ ಹುಲಿ ದಿನದ ಸವಿ ನೆನಪಿನಲ್ಲಿ ಬುಧವಾರ ಲೋಕಾರ್ಪಣೆ ಮಾಡಲಾಯಿತು. ಈ ಮೊಬೈಲ್ ಆಪ್ ರಾಜ್ಯದ ೯ ಮೃಗಾಯಲಗಳ ಕುರಿತು ಮಾಹಿತಿ, ಪ್ರಾಣಿ, ಪಕ್ಷಿಗಳ ದತ್ತು ಸ್ವೀಕಾರ, ದೇಣಿಗೆ ನೀಡಲು ಅವಕಾಶ ಕಲ್ಪಿಸಲಿದೆ.
ಕೋವಿಡ್ ಹಿನ್ನಲೆಯಲ್ಲಿ ಆನ್ ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮೊಬೈಲ್ ಆಪ್‌ನ್ನು ಅರಣ್ಯ ಸಚಿವ ಆನಂದ್‌ಸಿoಗ್ ಹಾಗೂ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಸಚಿವ ಆನಂದ್‌ಸಿoಗ್, ಕೋವಿಡ್‌ನಿಂದ ಮೃಗಾಲಯದ ಪ್ರಾಣಿಗಳು ಹಾಗೂ ಅಲ್ಲಿನ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರಾಜ್ಯದಲ್ಲಿ ಮೈಸೂರು ಮೃಗಾಲಯಕ್ಕೆ ಅದರದ್ದೆ ಆದ ಹೆಗ್ಗಳಿಕೆಯಿದೆ. ಇಲ್ಲಿನ ಸಿಬ್ಬಂದಿ ಮೃಗಾಲಯದ ಪ್ರಾಣಿಗಳ ಸಂರಕ್ಷಣೆ ಮಾಡುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಹಣಕಾಸಿನ ನೆರವು ಇಲ್ಲದೆ ಮೃಗಾಲಯಗಳು ನಡೆಯುತ್ತಿವೆ. ಪ್ರವಾಸಿಗರಿಂದ ಬರುವ ಆದಾಯದಿಂದ ಮೃಗಾಲಯದ ಪಾಲನೆ ಮಾಡಲಾಗುತ್ತಿದೆ. ಆದರೆ ಕೋವಿಡ್ ಸಂಕಷ್ಟದಿoದಾಗಿ ಮೃಗಾಲಯಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ೩.೫ ಕೋಟಿ ರೂಗಳನ್ನು ದಾನಿಗಳಿಂದ ಸಂಗ್ರಹಿಸಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಸಹ ಸರ್ಕಾರ ಹಾಗೂ ವೈಯಕ್ತಿಕವಾಗಿ ಮೃಗಾಲಯದ ಸಮಸ್ಯೆ ನಿವಾರಿಸುತ್ತೇನೆ ಎಂದರು.
ಕೋವಿಡ್‌ನಿಂದಾಗಿ ಇಲಾಖೆ ಕೆಲಸಗಳಿಗೆ ಕೈಜೋಡಿಸಲು ಸಾಧ್ಯವಾಗುತ್ತಿಲ್ಲ. ಆದರೂ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇಲಾಖೆಗೆ ಸಂಬoಧಿಸಿದ ಯಾವುದೇ ಕುಂದು ಕೊರತೆಗಳಿದ್ದರೆ ನೇರವಾಗಿ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದರು. ಹಂಪಿ ಮೃಗಾಲಯಕ್ಕೆ ಬರುವಂತೆ ಇದೇ ವೇಳೆ ಯದುವೀರ್‌ಗೆ ಆಹ್ವಾನ ನೀಡಿದರು.
ಯದುವೀರ್ ಕೃಷ್ಣದತ್ತ ಒಡೆಯರ್ ಮಾತನಾಡಿ, ಜೀವ ವೈವಿಧ್ಯತೆ ಸಂರಕ್ಷಣೆಗಾಗಿ ಮೃಗಾಲಯದಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿತ್ತು. ಮುಂದೆಯೂ ಇದನ್ನು ನಡೆಸಿದರೆ, ಮಕ್ಕಳಿಗೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಆಸಕ್ತಿ ಬೆಳೆಯಲಿದೆ. ಮೃಗಾಲಯಕ್ಕೆ ಅಗತ್ಯವಿರುವ ಎಲ್ಲಾ ಅನುಕೂಲಗಳನ್ನು ಅರಮನೆವತಿಯಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss