Wednesday, June 29, 2022

Latest Posts

ಟರ್ಮಿನಲ್ ಗೆ ಕೂಗು: ಜಿಲ್ಲೆಯ 10 ಆದರ್ಶ ನಿಲ್ದಾಣಗಳ ನಿರ್ವಹಣೆಯೂ ಕಳಪೆ?

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಅಗತ್ಯದ ಭೂಮಿ ಇದ್ದರೂ, ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಹಾಗೂ ರೈಲ್ವೇ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವಲ್ಲಿ ಕೇರಳ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಕುಂಬಳೆ ರೈಲು ನಿಲ್ದಾಣವನ್ನು ಟರ್ಮಿನಲ್ ರೈಲು ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕೆಂಬ ಆಗ್ರಹದ ನಡುವೆ ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕೆಂಬ ಬಗ್ಗೆಯೂ ಸಾರ್ವಜನಿಕ ವಲಯದಿಂದ ತೀವ್ರವಾದ ಒತ್ತಾಯ ಕೇಳಿಬರುತ್ತಿದೆ.

ಈ ರೈಲ್ವೇ ನಿಲ್ದಾಣಕ್ಕೆ ಸುಮಾರು 35 ಎಕರೆ ಜಾಗವಿದ್ದರೂ, ಇದರಲ್ಲಿ ಒಂದಷ್ಟು ಭೂಮಿಯನ್ನು ಅನ್ಯರು ಕಬಳಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ರೈಲ್ವೇ ನಿಲ್ದಾಣದ ಸ್ಥಳವನ್ನು ಸಮಗ್ರವಾಗಿ ಸರ್ವೇ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ.

ರೈಲ್ವೇ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ ನಡುವೆ ಇರುವ ಜಾಗದಲ್ಲಿ ಕೆಲವು ಕಟ್ಟಡಗಳನ್ನು ಕಟ್ಟಲಾಗಿದ್ದು, ಇವುಗಳಲ್ಲಿ ಕೆಲವು ಕಟ್ಟಡಗಳನ್ನು ರೈಲ್ವೇ ಇಲಾಖೆಯ ಭೂಮಿಯನ್ನು ಅನಧಿಕೃತವಾಗಿ ವಶಪಡಿಸಿಕೊಂಡು ಕಟ್ಟಿರುವುದಾಗಿ ವ್ಯಾಪಕವಾಗಿ ದೂರಲಾಗಿದೆ. ಇಂತಹ ಅತಿಕ್ರಮಣವನ್ನು ಪತ್ತೆಹಚ್ಚಿ ತೆರವುಗೊಳಿಸುವ ಪ್ರಕ್ರಿಯೆಗೂ ರೈಲ್ವೇ ಇಲಾಖೆಯು ಮುಂದಾಗಬೇಕೆಂದು ಜನರು ಆಗ್ರಹಿಸಿದ್ದಾರೆ.

ಈಗಾಗಲೇ ರೈಲ್ವೇ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿ ಮಧ್ಯೆ ರೈಲ್ವೇ ಇಲಾಖೆಯು ಆವರಣ ಗೋಡೆ ನಿರ್ಮಿಸಿದೆ. ಇದೇ ವೇಳೆ ರೈಲ್ವೇ ಇಲಾಖೆಯ ಜಾಗವನ್ನು ಅಳತೆ ಮಾಡಿ ತಮ್ಮ ಜಾಗವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಸಮಗ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಕುಂಬಳೆ ರೈಲ್ವೇ ನಿಲ್ದಾಣ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷೆ, ಜಿಲ್ಲಾ ಪಂಚಾಯತ್ ಸದಸ್ಯೆ ಫರೀದಾ ಝಕೀರ್ ಅಹಮ್ಮದ್ ಒತ್ತಾಯಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಮೂರು ಎ ದರ್ಜೆ ಸಹಿತ 16 ರೈಲು ನಿಲ್ದಾಣಗಳಿದ್ದು, ಇದರಲ್ಲಿ 10 ಆದರ್ಶ ನಿಲ್ದಾಣಗಳಾಗಿವೆ. ಆದರೆ ಇವುಗಳ ನಿರ್ವಹಣೆ ಮಾತ್ರ ಕಳಪೆಯಾಗಿದೆ ಎಂಬ ಆರೋಪವಿದೆ. ಪ್ರಸಕ್ತ  ಕೇರಳ, ಕರ್ನಾಟಕ, ಮಹಾರಾಷ್ಟ್ರ ಸಹಿತ ವಿವಿಧೆಡೆ ಸಂಚರಿಸುವ ರೈಲುಗಳು ಮಂಗಳೂರಿನಿಂದ ಪ್ರಯಾಣ ಆರಂಭಿಸುತ್ತಿದ್ದು, ಅಲ್ಲಿ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಆದ್ದರಿಂದ ಅಗತ್ಯದ ಸ್ಥಳಾವಕಾಶದ ನಿಟ್ಟಿನಲ್ಲಿ ಕುಂಬಳೆಯಲ್ಲಿ ಟರ್ಮಿನಲ್ ರೈಲ್ವೇ ನಿಲ್ದಾಣ ಸ್ಥಾಪನೆಗೆ ಒತ್ತಾಯ ವ್ಯಾಪಕವಾಗಿದೆ.

ಈಗಾಗಲೇ ಕೇರಳದಲ್ಲಿ ಎರ್ನಾಕುಲಂ ಜಂಕ್ಷನ್, ತಿರುವನಂತಪುರದ ಕೊಚ್ಚುವೇಳಿಯಲ್ಲಿ ಪ್ರಮುಖ ಟರ್ಮಿನಲ್ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ. ಜೊತೆಗೆ ತಿರುವನಂತಪುರದ ನೇಮಂನಲ್ಲಿ ಟರ್ಮಿನಲ್ ಸ್ಥಾಪನೆಗೂ ರೈಲ್ವೇ ಇಲಾಖೆಯು ಯೋಜನೆ ರೂಪಿಸಿದೆ. ಕುಂಬಳೆ ರೈಲು ನಿಲ್ದಾಣವನ್ನು ಟರ್ಮಿನಲ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಿದಲ್ಲಿ ಮಂಗಳೂರಿನಲ್ಲಿ ರೈಲುಗಳ ದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ. ಜೊತೆಗೆ ಕುಂಬಳೆಯ ಸಮಗ್ರ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. ಕುಂಬಳೆ ರೈಲ್ವೇ ನಿಲ್ದಾಣವನ್ನು ಟರ್ಮಿನಲ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವುದರ ಜೊತೆಗೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಅಭಿವೃದ್ಧಿಗೆ ಗುರಿ: ಕೋಟಿಕುಳಂನಲ್ಲಿ ಅಪಘಾತ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದ ರೈಲ್ವೇ ಕ್ರಾಸಿಂಗ್ ಬದಲು ಮೇಲ್ಸೇತುವೆ ನಿರ್ಮಿಸುವುದು, ತಿರುವನಂತಪುರ – ಕಣ್ಣೂರು ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಗಾಡಿಯನ್ನು ಕುಂಬಳೆವರೆಗೆ ವಿಸ್ತರಿಸುವುದು. ಬೇಕಲ ರೈಲ್ವೇ ನಿಲ್ದಾಣ ಅಭಿವೃದ್ಧಿ, ಬೈಂದೂರು (ಕೊಲ್ಲೂರು) – ಶೋರ್ನೂರು ರೈಲು ಸಂಚಾರ ಪುನರಾರಂಭಿಸುವುದು, ಹಗಲು ಹೊತ್ತು  ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಕಣ್ಣೂರು – ಮಂಗಳೂರು ಮಾರ್ಗದಲ್ಲಿ ಮತ್ತಷ್ಟು ರೈಲುಗಳನ್ನು ಅಳವಡಿಸುವುದು, ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ಆರಂಭಿಸುವುದು ಮುಂತಾದ ಬೇಡಿಕೆಗಳನ್ನು ಈಡೇರಿಸಿದಾಗ ಕುಂಬಳೆ ಸೇರಿದಂತೆ ಕಾಸರಗೋಡು ಜಿಲ್ಲೆಯ ಎಲ್ಲ ರೈಲು ನಿಲ್ದಾಣಗಳ ಅಭಿವೃದ್ಧಿ ಸಾಧ್ಯವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss