ಮೈಸೂರು: ಟಿಪ್ಪು ಸ್ವತಂತ್ರ ಹೋರಾಟಗಾರ, ಈ ನೆಲದ ಮಣ್ಣಿನ ಮಗ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆಗೆ ಸಂಸದ ಪ್ರತಾಪ್ಸಿಂಹ ತೀವ್ರವಾಗಿ ಕಿಡಿಕಾರಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತಾನಾಡಬೇಕು ಎಂದು ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್. ವಿಶ್ವನಾಥ್ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಆದರೆ ಅವರ ಪೂರ್ವಾಶ್ರಮ ಪ್ರಭಾವ ಇನ್ನೂ ಇದ್ದಂತಿದೆ ಎಂದು ಲೇವಡಿ ಮಾಡಿದರು. ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಕಾಲಿಟ್ಟಿದ್ದಾರೆ. ಹಾಗಾಗಿ ಮೈಸೂರಿನ ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಮೈಸೂರಿನ ಯದುವಂಶವನ್ನು ನಿರ್ನಾಮ ಮಾಡಲು ಹೊರಟವರು ಯಾರು.? ಕನ್ನಡ ಭಾಷೆಯ ಮೇಲೆ ಪ್ರಹಾರ ಮಾಡಿ ರೆವಿನ್ಯೂ ಡಿಪಾರ್ಟ್ ಮೆಂಟ್ ನಲ್ಲಿ ಖಾತೆ, ಬಗರ್ ಹುಕುಂ ಪದಗಳನ್ನ ತಂದಿದ್ದು ಯಾರು.? ಮೈಸೂರು ಸಾಮ್ರಾಜ್ಯವನ್ನ ಸುಭಿಕ್ಷಗೊಳಿಸಿದವರು. ಕನ್ನಂಬಾಡಿ ಕಟ್ಟೆ ಕಟ್ಟಿ ಜನರ ಹಿತ ಕಾಯ್ದವರು ಮೈಸೂರು ಅರಸರು. ಅಂತಹ ಮೈಸೂರು ರಾಜರನ್ನು ನಿರ್ನಾಮ ಮಾಡಲು ಹೊರಟವರು ಯಾರು..? ಎಂದು ಪ್ರಶ್ನೆ ಹಾಕಿದರು.
ಟಿಪ್ಪು ವೀರ ಶೂರ ಅಂತ ಹೇಳಲು ಸಾಧ್ಯವಿಲ್ಲ. ಟಿಪ್ಪು ಸತ್ತಾಗ ಸ್ವತಂತ್ರ ಹೋರಾಟವೇ ಶುರವಾಗಿರಲಿಲ್ಲ. ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತಾನಾಡಬೇಕು ಎಂದು ತಿರುಗೇಟು ನೀಡಿದ್ದಾರೆ.
ಶಿವಾಜಿ ದೇಶಕಂಡ ಅಪ್ರತಿಮ ಹೋರಾಟಗಾರ. ಅದೇ ರೀತಿ ಕರ್ನಾಟಕಕ್ಕೆ ಬಂದರೆ ಸಂಗೊಳ್ಳಿ ರಾಯಣ್ಣ ಕೂಡ ಅಪ್ರತಿಮ ಹೋರಾಟಗಾರರೇ. ಶಿವಾಜಿ ದೇಶದ ಸ್ವಾಭಿಮಾನವಾದ್ರೆ ಸಂಗೊಳ್ಳಿ ರಾಯಣ್ಣ ಕನ್ನಡಿಗರ ಸ್ವಾಭಿಮಾನ. ಯಾರು ಹೆಚ್ಚು ಯಾರು ಕಡಿಮೆ ಅಂತಾ ನೋಡೋಕೆ ಕೆಲವರು ಪ್ರಯತ್ನ ಮಾಡ್ತಿದ್ದಾರೆ. ಇದು ಸರಿಯಲ್ಲ. ಇಬ್ಬರೂ ಕೂಡ ನಮಗೆ ಮುಖ್ಯ. ಇಬ್ಬರ ಪ್ರತಿಮೆ ಎರಡೂ ರಾಜ್ಯಗಳಲ್ಲಾಗಬೇಕು. ಕನ್ನಡಿಗರು, ಮರಾಠಿಗರು ಅಂತಾ ಸಾಮರಸ್ಯ ಹಾಳು ಮಾಡುವುದು ಬೇಡ ಎಂದು ಸಲಹೆ ನೀಡಿದರು.
ಈ ವಿಚಾರದಲ್ಲಿ ವಿನಾಕಾರಣ ಭಾಷಾ ವೈಷಮ್ಯ ಮೂಡಿಸಬಾರದು. ಮರಾಠಿಗರು ಬೇರೆಯಲ್ಲ, ಕನ್ನಡಿಗರು ಬೇರೆಯಲ್ಲ ಇಬ್ಬರ ನಡುವೆ ವೈಮನಸ್ಸು ಮೂಡಿಸುವ ಕೆಲಸ ಮಾಡಬಾರದು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಡೀ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುತ್ತಿದ್ದಾರೆ. ಎಲ್ಲಾ ಸಂಘಟನೆಗಳು ಇದಕ್ಕೆ ಸಹಕರಿಸಬೇಕು ಎಂದರು.