spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟಿಬೆಟ್: ಚೀನಾಕ್ಕೆ ಅಮೆರಿಕ ಸಡ್ಡು

- Advertisement -Nitte

ಇತ್ತೀಚೆಗೆ ಅಮೆರಿಕವು ಟಿಬೆಟ್‌ಗೆ ಸಂಬಂಧಿಸಿ ಹೊಸದೊಂದು ನಿರ್ಣಯವನ್ನು ಅಂಗೀಕರಿಸಿತು. ಇದು ಟಿಬೆಟಿಗೆ ಸಂಬಂಧಿಸಿ ಹಾಗೂ ಚೀನಾದೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿ ಅಮೆರಿಕದ ಬದಲಾದ ನಿಲುವನ್ನು ಸೂಚಿಸುತ್ತಿದೆ. ಚೀನಾದ ಬೆದರಿಕೆಯನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತಂತೆ ಇದು ಭಾರತಕ್ಕೆ ಪಾಠವನ್ನೂ ಹೇಳಿಕೊಡುತ್ತದೆ. ‘ಟಿಬೆಟಿಯನ್ ನೀತಿ ಮತ್ತು ಬೆಂಬಲ ಕಾಯ್ದೆ’ ಎಂಬ ಹೆಸರಿನ ಈ ನೂತನ ನಿರ್ಣಯವು ಟಿಬೆಟಿಗೆ ಸಂಬಂಧಿಸಿದ ಹಿಂದಿನ ಕಾನೂನುಗಳೆಲ್ಲವನ್ನು ಬದಲಿಸುತ್ತದೆ. ಇದು ಚೀನಾದ ಕುರಿತಾದ ಅಮೆರಿಕದ ಹೊಸ ನಿಲುವನ್ನು ನಿಚ್ಚಳಗೊಳಿಸಿದೆ. ಚೀನಾದ ಪ್ರಾಬಲ್ಯಕ್ಕೆ ಸಡ್ಡು ಹೊಡೆಯುವುದೇ ಅಮೆರಿಕದ ಉದ್ದೇಶವಾಗಿರುವಂತೆ ಕಂಡುಬರುತ್ತದೆ.

ವಿಶೇಷವೆಂದರೆ ಪಕ್ಷಭೇದ ಮರೆತು ಅಮೆರಿಕನ್ ಸಂಸದರು ಇದಕ್ಕೆ ಬೆಂಬಲ ಸೂಚಿಸಿರುವುದು. ಟಿಬೆಟಿನ ಮುಂದಿನ ಲಾಮಾ ಅವರನ್ನು ನೇಮಿಸುವ ಹಾಗೂ ಅವರಿಗೆ ಮಾನ್ಯತೆ ನೀಡುವ ಸಂಪೂರ್ಣ ಅಧಿಕಾರವು ಚೀನಾದ ಕಮ್ಯುನಿಸ್ಟ್ ಪಕ್ಷದ ಕೈಯಲ್ಲಿದೆ ಎಂಬುದಾಗಿ ಚೀನಾ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲೆ ಅಮೆರಿಕವು ಈ ನಿರ್ಣಯ ಜಾರಿಗೊಳಿಸುವ ಮೂಲಕ ಚೀನಾಕ್ಕೆ ಸಡ್ಡು ಹೊಡೆದಿದೆ.

1951ರಲ್ಲಿ ಮಾವೋ ಅವರ ಪೀಪಲ್ಸ್ ಆರ್ಮಿ ಟಿಬೆಟನ್ನು ವಶಪಡಿಸಿ ಕೊಂಡಂದಿನಿಂದ ಟಿಬೆಟನ್ನು ತನ್ನ ಸ್ವತ್ತಿನಂತೆ ಚೀನಾ ಪರಿಗಣಿಸುತ್ತಿದೆ. ಜಗತ್ತಿನ ಯಾವುದೇ ದೇಶವು ಟಿಬೆಟಿನ ಉಲ್ಲೇಖವೆತ್ತುವುದನ್ನೂ ಅದು ಸಹಿಸುತ್ತಿಲ್ಲ. ಇದೀಗ ಅಮೆರಿಕವು ಟಿಬೆಟ್ ಕುರಿತಂತೆ ನಿರ್ಣಯ ತೆಗೆದುಕೊಂಡಿರುವುದು ಕೂಡ ಚೀನಾಕ್ಕೆ ಆಕ್ರೋಶ ಹುಟ್ಟಿಸಿದೆ. ಇದು ಚೀನಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಎಂಬುದಾಗಿ ಚೀನಾ ಬಣ್ಣಿಸಿದೆ. ಅಮೆರಿಕದ ನಿರ್ಣಯವು ಟಿಬೆಟಿನ ಸ್ವಾತಂತ್ರ್ಯ ಬಯಸುವವರಿಗೆ ತಪ್ಪು ಸಂದೇಶ ರವಾನಿಸುತ್ತಿದೆ. ಚೀನಾ ಇದನ್ನು ಖಂಡತುಂಡವಾಗಿ ವಿರೋಧಿಸುವುದು ಎಂಬುದಾಗಿ ಚೀನೀ ವಕ್ತಾರರು ಹೇಳಿದ್ದಾರೆ.

ಚೀನಾದ ಪ್ರತಿಕ್ರಿಯೆಯಲ್ಲಿ ಆಶ್ಚರ್ಯವೇನೂ ಇಲ್ಲ. ಪ್ರಸಕ್ತ ದಲಾಯಿ ಲಾಮಾ (14ನೇ ದಲಾಯಿ ಲಾಮಾ) ಅವರು ವಿಧಿವಶವಾಗುವುದನ್ನು ಚೀನಾ ಕಾಯುತ್ತಿದೆ. ಆ ಬಳಿಕ ತಮ್ಮದೇ ಆಯ್ಕೆಯ ಬಾಲಕನನ್ನು ದಲಾಯಿ ಲಾಮಾ ಆಗಿ ಆರಿಸಿ, ಪಟ್ಟದಲ್ಲಿ ಕುಳ್ಳಿರಿಸುವುದು ಚೀನಾದ ಯೋಜನೆ ಯಾಗಿದೆ. ಆ ಮೂಲಕ ಟಿಬೆಟಿನ ಜನತೆಯ ನಿಷ್ಠೆಯನ್ನು ತನ್ನೆಡೆಗೆ ಬದಲಿಸಿಕೊಳ್ಳಲು ಚೀನಾ ಹವಣಿಸುತ್ತಿದೆ.

ಆದರೆ ಅಮೆರಿಕವು ಚೀನಾದ ಈ ಹವಣಿಕೆಗೆ ತಿರುಗೇಟು ನೀಡಿದೆ. ಮುಂದಿನ ದಲಾಯಿ ಲಾಮಾ ಅವರನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವು ಟಿಬೆಟಿಯನ್ನರ ಕೈಯಲ್ಲಿದೆ ಎಂಬುದಾಗಿ ತನ್ನ ನಿರ್ಣಯದಲ್ಲಿ ಹೇಳಿದೆ. ಮುಂದಿನ ಬಾಲಕ ದಲಾಯಿ ಲಾಮಾರಿಗೆ ಶಿಕ್ಷಣ ನೀಡುವಲ್ಲಿ ಮತ್ತು ಬೆಳೆಸುವಲ್ಲಿ ಚೀನಾಕ್ಕೆ ಯಾವುದೇ ಪಾತ್ರವಿಲ್ಲವೆಂದೂ ಅಮೆರಿಕವು ಹೇಳಿದೆ. ಒಂದು ವೇಳೆ ಮುಂದಿನ ಲಾಮಾ ಅವರನ್ನು ಆಯ್ಕೆ ಮಾಡಲು ಚೀನಾ ಮುಂದುವರಿದರೆ, ಅದಕ್ಕೆ ಸಂಬಂಧಿಸಿದ ಚೀನೀ ಅಧಿಕಾರಿಗಳ ವಿರುದ್ಧ ಅಂತಾರಾಷ್ಟ್ರೀಯವಾಗಿ ಕ್ರಮ ತೆಗೆದುಕೊಳ್ಳಲೂ ಅಮೆರಿಕದ ವಿದೇಶಾಂಗ ಇಲಾಖೆಗೆ ಅಧಿಕಾರ ನೀಡಲಾಗಿದೆ.

ಅಮೆರಿಕದ ನಿರ್ಣಯದಲ್ಲಿ ಇನ್ನೂ ಒಂದು ಮಹತ್ವದ ಅಂಶವಿದೆ. ಟಿಬೆಟಿನಲ್ಲಿ ತನ್ನ ದೂತಾವಾಸ ತೆರೆಯಲು ಚೀನಾ ಅವಕಾಶ ನೀಡದಿರುವುದನ್ನು ಪ್ರಸ್ತಾಪಿಸಿರುವ ಅಮೆರಿಕವು, ಇನ್ನು ಮುಂದೆ ಚೀನಾವು ಅಮೆರಿಕದ ಯಾವುದೇ ಜಾಗದಲ್ಲಿ ತನ್ನ ದೂತಾವಾಸ ತೆರೆಯಲು ಬಯಸುವುದಾದರೆ ಅದಕ್ಕೆ ಮುನ್ನ ಟಿಬೆಟಿನಲ್ಲಿ ತನ್ನ ದೂತಾವಾಸ ತೆರೆಯಲು ಅವಕಾಶ ಮಾಡಿಕೊಡುವುದು ಅತ್ಯವಶ್ಯ ಎಂದು ಹೇಳಿದೆ. ಭಾರತದಲ್ಲಿ ಆಶ್ರಮಯ ಪಡೆದಿರುವ ಟಿಬೆಟಿಯನ್ನರಿಗೂ ಅಮೆರಿಕವು ಬೆಂಬಲ ವ್ಯಕ್ತಪಡಿಸಿದೆ.

ಅಮೆರಿಕದ ನಿರ್ಣಯದ ಮತ್ತೂ ಒಂದು ವಿಶೇಷವೆಂದರೆ ಮುಂದಿನ ದಲಾಯಿ ಲಾಮಾ ಅವರನ್ನು ಆಯ್ಕೆ ಮಾಡುವಲ್ಲಿ ಯಾವುದೇ ಪಾತ್ರ ವಹಿಸದಂತೆ ಚೀನಾದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೇರುವ ನಿಟ್ಟಿನಲ್ಲಿ ‘ಅಂತಾರಾಷ್ಟ್ರೀಯ ರಾಜತಾಂತ್ರಿಕ ಮೈತ್ರಿಕೂಟ’ ರಚಿಸಲು ಯೋಜಿಸಿದೆ. ಚೀನಾವು ಈಗಾಗಲೆ ನೂತನ ಲಾಮಾಗಳ ನೇಮಕಕ್ಕೆ ಪ್ರಯತ್ನ ನಡೆಸಿದೆ. ಪಂಚೇನ್ ಲಾಮಾ ಮತ್ತು ಕರ್ಮಾ ಪಾ ಹುದ್ದೆಗಳಿಗೆ ಇಬ್ಬರು ಬಾಲಕರನ್ನು 1990ರಲ್ಲೆ ಆಯ್ಕೆ ಮಾಡಿತ್ತು. ಆದರೆ ಅವರಲ್ಲಿ  ಕರ್ಮಾ ಪಾ 2000ರಲ್ಲಿ ಭಾರತಕ್ಕೆ ಪಲಾಯನ ಮಾಡಿ ಬಂದಿದ್ದ. ಒಂದು ರೀತಿಯಲ್ಲಿ ಅಮೆರಿಕವು ಭಾರತದ ಧರ್ಮಶಾಲಾದಿಂದ ನಡೆಯುತ್ತಿರುವ ಟಿಬಿಟಿಯನ್ ಆಡಳಿತವನ್ನು ಮಾನ್ಯ ಮಾಡಿದೆ. ಅದನ್ನು ಟಿಬೆಟಿನ ‘ದೇಶಾಂತರ ಸರಕಾರ ’ ಎಂಬುದಾಗಿಯೂ ಮಾನ್ಯ ಮಾಡಿದೆ. ಚೀನಾವು ಯಾವುದೇ ಮಾತುಕತೆ ನಡೆಸುವುದಿದ್ದರೆ ದಲಾಯಿ ಲಾಮಾ ಜತೆಗೆ ಅಥವಾ ಪ್ರಜಾತಾಂತ್ರಿಕವಾಗಿ ಚುನಾಯಿತರಾದ ಟಿಬೆಟಿಯನ್ ಸಮುದಾಯದೊಂದಿಗೆ ನಡೆಸಬೇಕು ಎಂದು ಅಮೆರಿಕವು ಹೇಳಿದೆ.

ಇವೆಲ್ಲವೂ ಚೀನಾ ಇದುವರೆಗೆ ಪಾಲಿಸಿಕೊಂಡು ನೀತಿಯನ್ನು ವಿರೋಧಿಸುವಂತದ್ದಾಗಿದೆ. ಚೀನಾವು ಧರ್ಮಶಾಲಾದಿಂದ ನಡೆಯುತ್ತಿರುವ ‘ದೇಶಾಂತರ ಸರಕಾರ’ ವನ್ನು ಮಾನ್ಯ ಮಾಡುತ್ತಿಲ್ಲ. ಅದು ದಲಾಯಿ ಲಾಮಾ ಜತೆಗೆ ತಾನು ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದೂ ಹೇಳುತ್ತಿದೆ. ಟಿಬೆಟ್ ಚೀನಾದ ಅವಿಭಾಜ್ಯ ಅಂಗ ಎಂಬುದಾಗಿಯೂ ಅದು ಹೇಳಿಕೊಳ್ಳುತ್ತಿದೆ. ಯಾವುದೇ ದೇಶವು ದಲಾಯಿ ಲಾಮಾ ಅವರನ್ನು ಹಾಗೂ ಅವರ ದೇಶಾಂತರ ಸರಕಾರವನ್ನು ಮಾನ್ಯ ಮಾಡುವುದರ ವಿರುದ್ಧ ಚೀನಾವು ಕೆಂಡ ಕಾರುತ್ತದೆ. ಆದರೀಗ ಅಮೆರಿಕವು ತಳೆದಿರುವ ಹೊಸ ನಿಲುವು ಚೀನಾಕ್ಕೆ ನುಂಗಲಾರದ ತುತ್ತಾಗಿದೆ. ಚೀನಾವು ಕೊರೊನಾ ವೈರಸ್‌ ನಿಂದಾಗಿ ಭಾರೀ ದೊಡ್ಡ ಬಿಕ್ಕಟ್ಟಿಗೆ ಸಿಲುಕಿರುವ ಸಮಯದಲ್ಲೆ ಅಮೆರಿಕವು ತನ್ನ ದಾಳ ಉರುಳಿಸಿದೆ. ಕೊರೊನಾ ವೈರಸ್‌ನಿಂದ ತನ್ನ ಸಾಮಾಜಿಕ ಸ್ಥಿತಿಯನ್ನು, ಆರ್ಥಿಕ ಸ್ಥಿತಿಯನ್ನು ಉಳಿಸಿಕೊಳ್ಳಲು ಪೇಚಾಡುತ್ತಿರುವ ಚೀನಾವು ಅಮೆರಿಕದ ಹೊಸ ನಿಲುವಿನ ಕುರಿತಂತೆ ಅತ್ಯುಗ್ರ ನಿಲುವು ತಳೆಯುವ ಪರಿಸ್ಥಿತಿಯಲ್ಲಿ ಸದ್ಯಕ್ಕಂತೂ ಇಲ್ಲ. ಅಮೆರಿಕವಾದರೂ ಅಷ್ಟೆ, ವ್ಯಾಪಾರದ ವಿಷಯದಲ್ಲಿ ಚೀನಾದೊಂದಿಗೆ ಸಮರ ಸಾರಿರುವ ಅದು ಚೀನಾದ ಶಕ್ತಿಯನ್ನು ಕುಂದಿಸಲು ಕಾದುಕೊಂಡೇ ಇದೆ. ಅದಕ್ಕೆ ಟಿಬೆಟನ್ನು ಈಗ ಬಳಸಿಕೊಂಡಿದೆ.

ಭಾರತವು ಕೂಡ ಈಗ ಈ ಬೆಳವಣಿಗೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳ ಬೇಕಾಗಿದೆ. 1951ರಲ್ಲಿ ಚೀನಾವು ಟಿಬೆಟನ್ನು ವಶಪಡಿಸಿಕೊಂಡಂದಿನಿಂದ ಈ ಗಡಿಭಾಗದಲ್ಲಿ ಚೀನಾ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಅರುಣಾಚಲ ಪ್ರದೇಶ ಕೂಡ ತನ್ನದೆಂದು ಹೇಳುತ್ತಿದೆ. ಅರುಣಾಚಲ ಪ್ರದೇಶವು ಟಿಬೆಟಿನ ಒಂದು ಭಾಗ ಎಂದು ಹೇಳುತ್ತಿದೆ. ಅತ್ತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಕನಾಮಿಕ್ ಕಾರಿಡಾರ್ ಮಾಡಲು ಯೋಜಿಸುವ ಮೂಲಕ ಭಾರತದ ಸಮಗ್ರತೆಗೂ ಅಪಾಯ ತರುವ ರೀತಿಯಲ್ಲಿ ವರ್ತಿಸುತ್ತಿದೆ. ಇದಕ್ಕೆಲ್ಲ ಸಡ್ಡು ಹೊಡೆಯಲು ಭಾರತ ಕೂಡ ಟಿಬೆಟ್ ವಿಷಯವನ್ನು ಬಳಸಿಕೊಳ್ಳಬೇಕಾಗಿದೆ.

ಈಗ ಭಾರತವು ದಲಾಯಿ ಲಾಮಾ ಅವರಿಗೆ ಆಶ್ರಯ ನೀಡಿರುವುದು ನಿಜವಾದರೂ, ಅವರು ಟಿಬೆಟಿನ ನಿಜವಾದ ಮುಖ್ಯಸ್ಥರು ಎಂಬ ರೀತಿಯಲ್ಲಿ ಪ್ರಚುರಪಡಿಸಲು ಹಿಂಜರಿಯುತ್ತಿದೆ. ಟಿಬೆಟ್ ವಿಚಾರದಲ್ಲಿ ಚೀನಾದ ವಿರುದ್ಧವಾಗಿ ಮಾತನಾಡಲು ಹಿಂಜರಿಯುತ್ತಿದೆ. ಇನ್ನು ಮುಂದೆ ಭಾರತವು ಈ ಹಿಂಜರಿಕೆಯನ್ನು ತ್ಯಜಿಸಬೇಕಾಗಿದೆ. ಟಿಬೆಟಿನ ಸ್ವಾತಂತ್ರ್ಯದ ಕುರಿತಂತೆ ಅಮೆರಿಕದ ಜತೆಯಲ್ಲೇ ಧ್ವನಿಗೂಡಿಸಬೇಕಾಗಿದೆ. ದಲಾಯಿ ಲಾಮಾ ಅವರು ಟಿಬೆಟಿನ ಅಧಿಕೃತ ಮುಖ್ಯಸ್ಥರು ಎಂದು ತಾನೂ ಪ್ರಚುರಪಡಿಸಬೇಕಾಗಿದೆ. ಬಿಕ್ಕಟ್ಟಿನಲ್ಲಿ ಸಿಲುಕಿರುವ ಚೀನಾವನ್ನು ಈಗಲೇ ಬಗ್ಗಿಸಬೇಕಾಗಿರುವುದು ಮುಖ್ಯವಾಗಿದೆ.

-ಉಮೇಶ ಎನ್.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss