Thursday, July 7, 2022

Latest Posts

ಟಿಬೇಟಿಯನ್ನರ ಮೇಲಿರುವ ಪ್ರೀತಿ ಗಿರಿಜನರ ಮೇಲೆ ಏಕಿಲ್ಲ?: ರಾಯ್ ಡೇವಿಡ್ ಪ್ರಶ್ನೆ

ಹೊಸದಿಗಂತ ವರದಿ, ಕುಶಾಲನಗರ:

ಸಮೃದ್ಧಿಯಿಂದ ಕೂಡಿದ ಅರಣ್ಯ ಉಳಿಯಲು ಕಾರಣರಾಗಿರುವ ಗಿರಿಜನರನ್ನು ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ಕೊಡಗು ಗ್ರಾಮೀಣಾಭಿವೃದ್ದಿ ಸಂಸ್ಥೆಯ ನಿರ್ದೇಶಕ ರಾಯ್ ಡೇವಿಡ್ ಆರೋಪಿಸಿದರು.

ಯಡವನಾಡು ಗಿರಿಜನ ಹಾಡಿಯ ಸಮುದಾಯ ಭವನದಲ್ಲಿ ಆದಿವಾಸಿಗಳ ಹಕ್ಕುಗಳ ಕುರಿತಂತೆ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಐಷಾರಾಮಿ ಜೀವನ ನಡೆಸುತ್ತಿರುವ ಟಿಬೇಟಿಯನ್ನರಿಗೆ ಸಾವಿರಾರು ಎಕರೆಗಳಷ್ಟು ಕಾಡು ಕಡಿದು ಆಶ್ರಯ ಕಲ್ಪಿಸಿರುವ ಸರ್ಕಾರಗಳು, ಅರಣ್ಯಗಳ ರಕ್ಷಣೆಗೆ ಕಾರಣರಾಗಿರುವ ಆದಿವಾಸಿಗಳಿಗೆ ಕನಿಷ್ಟ ಸೂರು ಕಲ್ಪಿಸಲು ಹಾಗೂ ಜೀವನಕ್ಕೆ ಕೃಷಿ ಮಾಡಲು ಇದುವರೆಗೂ ಅಗತ್ಯ ಭೂಮಿ ನೀಡಲು ಏಕೆ ಸಾಧ್ಯವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಾರಂಪರಿಕ ಅರಣ್ಯವಾಸಿಗಳಾದ ಗಿರಿಜನರಿಗೆ ಸರ್ಕಾರಗಳು ಅಗತ್ಯವಾಗಿ ಕೊಡಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲಿನ ಜನರ ಜೀವನೋಪಾಯಕ್ಕೆ ಅಗತ್ಯವಿರುವ ಅರಣ್ಯ ಕಿರು ಉತ್ಪನ್ನಗಳ ಸಂಗ್ರಹಣೆಗೆ ಯಾವುದೇ ಗಡಿ ಗುರುತಿನ ಅಗತ್ಯವಿರಬಾರದು. ಅರಣ್ಯದೊಳಗಿನ ಮೂಲ ನಿವಾಸಿಗಳಾದ ಗಿರಿಜನರ ಅಭಿಪ್ರಾಯಗಳನ್ನು ಅಧಿಕಾರಿಗಳು ಗೌರವಿಸಿ ಕಾರ್ಯರೂಪಕ್ಕೆ ತರಬೇಕೇ ವಿನಹ ಅಧಿಕಾರಿಗಳು ಹೇಳಿದ್ದೇ ಕಾನೂನು ಆಗಬಾರದು ಎಂದು ರಾಯ್ ಡೇವಿಡ್ ಹೇಳಿದರು.

ಮತ್ತೋರ್ವ ಅತಿಥಿ ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ಮಾತನಾಡಿ, ಮೂಲಸೌಕರ್ಯ ಸಿಗದೇ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದ ಆದಿವಾಸಿಗಳಿಗೆ ಸರ್ಕಾರಗಳು ಒಂದಷ್ಟು ಸೌಲಭ್ಯವನ್ನು ನೀಡಿರಿವುದೇ ಆಗಿದ್ದರೆ ರಾಯ್ ಡೇವಿಡ್, ಜೆ.ಪಿ.ರಾಜು ಅವರಂತಹ ಹೋರಾಟಗಾರರು ಇದಕ್ಕೆ ಕಾರಣರು. ಗಿರಿಜನರು ಸಂಘಟಿತರಾಗದ ಹೊರತು ಯಾವುದೇ ಸವಲತ್ತುಗಳನ್ನು ಪಡೆದುಕೊಳ್ಳುವುದು ಅಸಾಧ್ಯ ಎಂದು ಚಂದ್ರು ಹೇಳಿದರು.

ಗ್ರಾಮ ಅರಣ್ಯ ಸಮಿತಿ ಹಾಗೂ ಗ್ರಾಮ ಸಭೆ ತೀರ್ಮಾನಿಸಿದ ಕಾಡಿನಲ್ಲಿ ಹಾಗೂ ನಿಗದಿಪಡಿಸಿದ ವ್ಯಾಪ್ತಿಯಲ್ಲಿ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆಗೆ ಅವಕಾಶ ಕಲ್ಪಿಸಿಕೊಡಬೇಕಿದೆ ಎಂದು ಚಂದ್ರು ಹೇಳಿದರು.

ಸೋಮವಾರಪೇಟೆ ತಾಲೂಕು ಸಮಾಜ‌ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ ರೈ, ಐಗೂರು ಗ್ರಾಮ ಪಂಚಾಯಿತಿ ಪಿಡಿಓ ಯಾದವ್,ಅರಣ್ಯ ಇಲಾಖೆಯ ಸಿಬ್ಬಂದಿ ಮನು, ಗಿರಿಜನ ಹಾಡಿಯ ಅರಣ್ಯ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವಿ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss