ಮಡಿಕೇರಿ: ತಲಕಾವೇರಿ ಕ್ಷೇತ್ರದ ತಾಯಿ ಕಾವೇರಿಯ ವಂಶ ಪಾರಂಪರ್ಯ ಅರ್ಚಕರಾದ, ವಿವಿಧ ಸಂಘಟನೆಯ ಮುಖಂಡ ಹಾಗೂ ಬ್ರಾಹ್ಮಣ ಸಮುದಾಯದ ಹಿರಿಯರಾದ ಟಿ.ಎಸ್ ನಾರಾಯಣಾಚಾರ್ ಅವರ ಬಗ್ಗೆ ಟಿವಿ ಮಾಧ್ಯಮದಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನಿಧಿಯ ಅಧ್ಯಕ್ಷ ಎ.ಗೋಪಾಲಕೃಷ್ಣ ಅವರು, ನಾರಾಯಣಾಚಾರ್ ಅವರ ವೈಯಕ್ತಿಕ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ. ಪ್ರಕೃತಿ ವಿಕೋಪದಂತಹ ಕಠಿಣ ಸಮಯದಲ್ಲಿ ಜನರಿಗೆ ಧೈರ್ಯ ತುಂಬಬೇಕಾದ ಪರಿಸ್ಥಿತಿಯಲ್ಲಿ, ಕೆಲ ಮಾಧ್ಯಮ ಮಿತ್ರರು ವೈಯಕ್ತಿಕ ತೇಜೋವಧೆ ಮಾಡುತ್ತಿರುವುದನ್ನು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ, ಹಾಗೂ ಕೊಡಗು ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಇಡೀ ಬ್ರಾಹ್ಮಣ ಸಮಾಜ ಶ್ರೀ ಟಿ.ಎಸ್ ನಾರಾಯಣಾಚಾರ್ ಮತ್ತು ಇತರರ ಕುಟುಂಬದ ಬೆಂಬಲಕ್ಕೆ ಇರುವುದಾಗಿ ತಿಳಿಸಿರುವ ಅವರು, ಬ್ರಾಹ್ಮಣ ಸಮಾಜದ ಬಗ್ಗೆ ಮತ್ತು ಯಾವುದೇ ಬ್ರಾಹ್ಮಣರ ಬಗ್ಗೆ ಇಲ್ಲ ಸಲ್ಲದ ಆಕ್ಷೇಪಾರ್ಹ, ಅವಹೇಳನಕಾರಿ ಪ್ರಸಾರವನ್ನು ಆಕ್ಷೇಪಿಸುವುದಾಗಿ ಅವರು ಹೇಳಿದ್ದಾರೆ.