ಮಂಗಳೂರು: ಟೈಲ್ಸ್ ಮತ್ತು ಗುಜರಿ ಕೆಲಸಕ್ಕೆ ಕಳೆದ ಕೆಲವು ತಿಂಗಳ ಹಿಂದೆ ಲಕ್ಷದ್ವೀಪಕ್ಕೆ ತೆರಳಿ ಬಾಕಿಯಾಗಿದ್ದ 19 ಮಂದಿ ಕಾರ್ಮಿಕರನ್ನು ಹಡಗಿನ ಮೂಲಕ ವಾಪಾಸು ಮಂಗಳೂರಿಗೆ ಕರೆತರಲಾಗಿದ್ದು, ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಗುಜರಿ ಕೆಲಸಕ್ಕೆ ತೆರಳಿದ್ದ ಈ ಕಾರ್ಮಿಕರು ಲಾಕ್ಡೌನ್ ಘೋಷಣೆಯಾಗಿದ್ದರಿಂದ ಅಲ್ಲಿಯೇ ಬಾಕಿಯಾಗಿದ್ದರು. ಗುರುವಾರ ಇವರನ್ನು ಲಕ್ಷದ್ವೀಪದ ಅಮಿನ್ ದಿವಿ ಹಡಗಿನಲ್ಲಿ ಮಂಗಳೂರಿಗೆ ಕರೆತರಲಾಗಿದೆ. ಲಕ್ಷದ್ವೀಪದ ಕಿಲ್ತಾನ್ ದ್ವೀಪದಲ್ಲಿ 11 ಮಂದಿ ಹಾಗೂ ಕವರತ್ತಿ ಮತ್ತು ಅಗಟ್ಟಿ ದ್ವೀಪದಲ್ಲಿ ತಲಾ ೪ ಮಂದಿ ವಾಸವಿದ್ದರು. ಗುರುವಾರ ಬೆಳಗ್ಗೆ ಲಕ್ಷದ್ವೀಪದ ಅಮಿನ್ ದಿವಿ ಹಡಗಿನಿಂದ ಇಳಿದ ಕೂಡಲೇ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. 19 ಮಂದಿ ಕಾರ್ಮಿಕರಲ್ಲಿ ೩ ಮಂದಿ ಮಹಿಳೆಯರಿದ್ದಾರೆ. ಇವರೆಲ್ಲರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.