ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜೋ ಬೈಡನ್ ಗೆಲುವನ್ನ ವಿರೋಧಿಸಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕಳೆದ ವಾರ ಸಂಸತ್ ಕಟ್ಟಡದ ಮೇಲೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ್ದು, ಬಳಿಕ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ಶಾಶ್ವತವಾಗಿ ರದ್ದುಗೊಳಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದು ಭಾರತೀಯ ಮೂಲದವರಾದ, ಟ್ವಿಟರ್ನ ಉನ್ನತ ಅಧಿಕಾರಿ-ಲಾಯರ್ ವಿಜಯಾ ಗಡ್ಡೆ.
ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಮಾಡಿದ್ದ ಕೆಲವು ಟ್ವೀಟ್ಗಳು ಕ್ಯಾಪಿಟಲ್ ಬಿಲ್ಡಿಂಗ್ ಮೇಲಿನ ದಾಳಿಗೆ ಪ್ರಚೋದನೆ ನೀಡಿದೆ ಎಂದು ಕಳೆದ ಶುಕ್ರವಾರ ಅವರ ಖಾತೆಯನ್ನು ಟ್ವಿಟರ್ 24 ಗಂಟೆಗಳವರೆಗೆ ಸಸ್ಪೆಂಡ್ ಮಾಡಿತ್ತು. ಅದಾಗಿಯೂ ಟ್ರಂಪ್ ತಮ್ಮ ಪ್ರಚಾರ ಟೀಂನ ಖಾತೆ ಹಾಗೂ ಅಮೆರಿಕಾ ಅಧ್ಯಕ್ಷರ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡೋದು ಮುಂದುವರೆಸಿದ್ದರು. ಹೀಗಾಗಿ ಅವರ ಟ್ವೀಟ್ಗಳು ಮತ್ತಷ್ಟು ಪ್ರಚೋದನೆಗೆ ಎಡೆ ಮಾಡಿಕೊಡಲಿದೆ ಎಂದು ಟ್ರಂಪ್ ಅವರ ಖಾಸಗಿ ಟ್ವಿಟರ್ ಖಾತೆಯನ್ನು ಖಾಯಂ ಆಗಿ ಬ್ಲಾಕ್ ಮಾಡಲಾಗಿದೆ.
ವಿಜಯ ಗಡ್ಡೆ ಟ್ವಿಟರ್ ನ ಕಾನೂನು, ನೀತಿ ಮತ್ತು ಟ್ರಸ್ಟ್, ಮತ್ತು ಸುಕ್ಷತೆ ವಿಚಾರಗಳ ಮುಖ್ಯಸ್ಥರಾಗಿದ್ದಾರೆ. ಮುಂದಿನ ಹಿಂಸಾಚಾರ ಅಪಾಯದ ಕಾರಣದಿಂದ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಹುಟ್ಟಿದ್ದ ವಿಜಯ, ಚಿಕ್ಕಂದಿನಲ್ಲಿಯೇ ಅಮೆರಿಕಾಕ್ಕೆ ತೆರಳಿದ್ದು, ಟೆಕ್ಸಾಸ್ ನಲ್ಲಿ ಬೆಳೆದಿದ್ದಾರೆ. ಮೆಕ್ಸಿಕೊದಲ್ಲಿನ ತೈಲ ಸಂಸ್ಕರಣಾ ಘಟಕದಲ್ಲಿ ರಾಸಾಯನಿಕ ಎಂಜಿನಿಯರ್ ಆಗಿ ಅವರ ತಂದೆ ಕೆಲಸ ಮಾಡಿದ್ದು, ನಂತರ ಅವರ ಕುಟುಂಬ,ನ್ಯೂ ಜೆರ್ಸಿಗೆ ತೆರಳಿದ್ದು, ಅಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದ್ದಾರೆ.
ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ನ್ಯೂ ಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್ ನಲ್ಲಿ ಪದವಿ ಪಡೆದಿರುವ ಗಡ್ಡೆ, 2011ರಲ್ಲಿ ಟ್ವಿಟರ್ ಕಂಪನಿಗೆ ಸೇರಿಕೊಂಡಿದ್ದರು. ಟ್ವಿಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯ ಗಡ್ಡೆ, ಏಂಜೆಲ್ಸ್ ನ ಸಹ ಸಂಸ್ಥಾಪಕರಾಗಿದ್ದಾರೆ. ಕಾರ್ಪೊರೇಟ್ ವಕೀಲರಾಗಿರುವ ಇವರು, ಸ್ವತಃ ನೀತಿಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜಾಗತಿಕ ರಾಜಕಾರಣದಲ್ಲಿ ಟ್ವಿಟ್ಟರ್ ಪಾತ್ರ ಹೆಚ್ಚಾದಂತೆ ಗಡ್ಡೆಯವರು ಇದರ ಮೇಲುಸ್ತುವಾರಿ ವಹಿಸಿದರು.