spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಕಾಯಿತರಿಂದ ರಕ್ಷಿಸಿಕೊಳ್ಳಲು ಗ್ರಾಮಗಳಿಗೆ ಕಾವಲಾಗಿದ್ದಾರೆ ಈ ‘ಗನ್ ವುಮೆನ್’!

- Advertisement -Nitte

ಭೋಪಾಲ್: ಡಕಾಯಿತರಿಂದ ಸ್ವಯಂ ಮತ್ತು ತಮ್ಮ ಕುಟುಂಬ ರಕ್ಷಿಸಿಕೊಳ್ಳಲು ಬಂದೂಕು ಹಿಡಿದವರು ರೇವಾ ಜಿಲ್ಲೆಯ ಕುಗ್ರಾಮಗಳ ವನವಾಸಿ ಹೆಂಗಸರು. ಬರೋಬ್ಬರಿ ೧೬ವರ್ಷಗಳಿಂದ ಮೂರು ಗ್ರಾಮಗಳ ೧೨ ಮಹಿಳೆಯರು ‘ಗನ್ ವುಮೆನ್’ಗಳಾಗಿದ್ದಾರೆ. ದುಡಿಮೆಗೆಂದು ಪರವೂರಿಗೆ ವಲಸೆ ಹೋಗುವ ಗಂಡಸರ ಅನುಪಸ್ಥಿತಿಯಲ್ಲಿ ತಮ್ಮ ಗ್ರಾಮಗಳನ್ನು ಕಾಯುತ್ತಿದ್ದಾರೆ.
ಈ ವನವಾಸಿ ಹೆಂಗಸರ ಧೈರ್ಯ ಅದೆಷ್ಟು ಸುದ್ದಿಯಾಗಿದೆ ಎಂದರೆ ಇಂದು ಓರ್ವ ಡಕಾಯಿತನಲ್ಲ, ಉಗ್ರಗಾಮಿಯೂ ಇವರ ಎದುರು ನಿಲ್ಲಲಾರ.
೨೦೦೭ರಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಶಿವಕುಮಾರ್ ಪಟೇಲ್ ಯಾನೆ ದಡುವಾ ಎಂಬ ಕುಖ್ಯಾತ ದರೋಡೆಕೋರನ ಸಹಿತ ಕಳ್ಳಕಾಕರ ಉಪಟಳವೇ ರೇವಾ ಜಿಲ್ಲೆಯ ಕುಗ್ರಾಮಗಳ ಹೆಂಗಸರು ಬಂದೂಕು ಹಿಡಿಯಲು ಮೂಲ ಕಾರಣ.
ಮಜ್‌ಹಿಯಾರ್ ಪಂಗಡಕ್ಕೆ ಸೇರಿದ ವನವಾಸಿ ಕುಟುಂಬಗಳ ಗಂಡಸರು ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಕೃಷಿಕೂಲಿ ಕಾರ್ಯ ಮತ್ತಿತರ ಕೆಲಸ ಹುಡುಕಿಕೊಂಡು ಊರೂರಿಗೆ ಅಲೆಯುವವರು. ಆ ಸಂದರ್ಭ ಗ್ರಾಮಗಳ ಜೋಪಡಿಗಳಲ್ಲಿ ಹೆಂಗಸರು, ಮಕ್ಕಳು, ವೃದ್ಧರು ಮಾತ್ರ ಇರುತ್ತಿದ್ದರು. ಇದೇ ಸಂದರ್ಭ ದರೋಡೆಕೋರ ದಡುವಾ ತನ್ನ ಗ್ಯಾಂಗ್‌ನೊಂದಿಗೆ ಈ ಗ್ರಾಮಗಳಿಗೆ ನುಗ್ಗಿ ಹೆಂಗಸರಿಗೆ ಕಿರುಕುಳ ಕೊಡುತ್ತಿದ್ದ.ಹುಡುಗಿಯರನ್ನು ಅಪಹರಿಸುತ್ತಿದ್ದ. ಮನೆಯ ಹಟ್ಟಿಯಲ್ಲಿನ ದನಕರುಗಳನ್ನು ಕದ್ದೊಯ್ಯುತ್ತಿದ್ದ. ಇವನ ಉಪಟಳದಿಂದ
ರೋಸಿದ್ದ ವನವಾಸಿ ಮಹಿಳೆಯರು ತಮಗೆ ಆತ್ಮರಕ್ಷಣೆಗೆ ಬಂದೂಕು ಬೇಕೆಂದು ಸರಕಾರದ ಮೊರೆ ಹೋಗಿದ್ದರು.
೨೦೦೪ರಲ್ಲಿ ಮುಖ್ಯಮಂತ್ರಿಗಳು ರೇವಾ ಜಿಲ್ಲೆಗೆ ಭೇಟಿ ಕೊಟ್ಟಾಗ ಗ್ರಾಮಗಳ ಹೆಂಗಸರು ತಮಗೆ ಬಂದೂಕು ಕೊಡಿಸುವಂತೆ ಮನವಿ ಮಾಡಿದ್ದು, ಸುಮಾರು ೧೨ ಹೆಂಗಸರಿಗೆ ಬಂದೂಕು ಮಂಜೂರು ಮಾಡಲಾಗಿತ್ತು. ಬಂದೂಕು ಸಿಕ್ಕ ಮರುದಿನವೇ ಘಟನೆಯೊಂದು ನಡೆಯಿತು. ನೆರೆಯ ಕಾಕರೇಡಿ ಗ್ರಾಮಕ್ಕೆ ಡಕಾಯಿತರ ಗ್ಯಾಂಗೊಂದು ಲಗ್ಗೆ ಇಟ್ಟಿತು. ಉ.ಪ್ರದೇಶ, ಮಧ್ಯಪ್ರದೇಶಗಳಲ್ಲಿ ಕುಖ್ಯಾತ ಈ ಗ್ಯಾಂಗ್ ಕಾಕರೇಡಿ ಗ್ರಾಮದ ಗಡಿಗೆ ತಲುಪುವುದನ್ನು ಮಹಿಳೆಯೊಬ್ಬಾಕೆ ನೋಡಿದರು. ಈಕೆ ಬಂದೂಕು ಹೊಂದಿರುವ ಮಹಿಳೆ. ತಕ್ಷಣವೇ ಈಕೆ ಇತರ ಬಂದೂಕುಧಾರಿ ಮಹಿಳೆಯರನ್ನು ಜಾಗೃತಗೊಳಿಸಲು ಬೊಬ್ಬೆ ಹಾಕಿದರು. ಗುಂಪು ಸೇರಿದ ಬಂದೂಕುಧಾರಿ ಹೆಂಗಸರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಂತೆ ದರೋಡೆಕೋರರು ನಡುಗಿ ಸ್ಥಳದಿಂದ ಕಾಲ್ಕಿತ್ತಿದ್ದರು. ಈ ಘಟನೆಯು ಗ್ರಾಮ ರಕ್ಷಕ ಮಹಿಳೆಯರಿಗೆ ಹೊಸ ಗೌರವ-ಘನತೆ ದೊರಕಿಸಿಕೊಟ್ಟಿತು.
ಬಂದೂಕು ಹೊಂದಿದ ನಂತರವೂ ಗ್ರಾಮವಾಸಿಗಳಿಗೆ ಕುಖ್ಯಾತ ದಡುವಾನ ಕಿರುಕುಳ ನಿಂತಿರಲಿಲ್ಲ. ಸತತ ೫ವರ್ಷ ಈತ ಗ್ರಾಮಗಳ ಮನೆಗಳಿಗೆ ನುಗ್ಗಿ ಕಿರುಕುಳ ಕೊಟ್ಟಿದ್ದ. ನಂತರ ೨೦೦೭ರಲ್ಲಿ ಈತ ಪೊಲೀಸ್ ಗುಂಡೇಟಿಗೆ ಬಲಿಯಾದ ನಂತರ ಗ್ರಾಮಗಳಲ್ಲಿ ಕೊಂಚ ನೆಮ್ಮದಿಯ ವಾತಾವರಣ ನೆಲೆಸಿತು. ಹಾಗೆಂದು ಮಹಿಳೆಯರು ಆಯುಧ ಬಳಕೆ ನಿಲ್ಲಿಸಿಲ್ಲ. ಇಂದು ಗ್ರಾಮಗಳಲ್ಲಿ ಪುಂಡುಪೋಕರಿಗಳ ಉಪಟಳ ಇಲ್ಲ. ಹಾಗಾಗಿ ಮದುವೆ ಸಮಾರಂಭ, ರಾಜಕೀಯ ಕಾರ್ಯಕ್ರಮಗಳ ಸಂದರ್ಭ ಈ ಮಹಿಳೆಯರು ಗಾಳಿಯಲ್ಲಿ ಗುಂಡು ಹಾರಿಸುವ ಕ್ರಮವಿದೆ.
ಪುರುಷರಿಗೆ ಸಮಾನ ದುಡಿಯುತ್ತಿದ್ದಾಳೆ
ಸಂಪ್ರದಾಯಸ್ಥ ವನವಾಸಿ ಮಹಿಳೆಯರು ಹಿಂದೆಲ್ಲಾ ಮನೆಯಿಂದ ಹೊರ ಬರುವಂತಿರಲಿಲ್ಲ. ಅಪರಿಚಿತರು ಬಂದಾಗ ಮುಖಕ್ಕೆ ಸೆರಗು ಹೊದೆಯಬೇಕು. ದುಡಿಮೆಗೆ ಹೋಗೋ ಹಾಗಿಲ್ಲ. ಆದರೆ ಡಕಾಯಿತರ ಉಪಟಳ ಜೋರಾದಾಗ ಜೊತೆಗೆ ದೇಶದ ಸೇನೆ, ಪೊಲೀಸ್ ಇಲಾಖೆ ಮತ್ತಿತರ ರಂಗಗಳಲ್ಲಿ ಮಹಿಳೆಯರ ದಿಟ್ಟತನ, ಪ್ರಾತಿನಿಧ್ಯದ ಸುದ್ದಿಗಳನ್ನು ಕೇಳಿ ತಿಳಿದುಕೊಂಡ ಈ ಮಹಿಳೆಯರು ತಾವೂ ಆತ್ಮರಕ್ಷಣೆಗಾಗಿ ಕ್ರಾಂತಿಕಾರಿಗಳಾಗಲು ನಿರ್ಧರಿಸಿದರು.ಇದೀಗ ಈ ಮಹಿಳೆಯರು ದುಡಿಯಲು ಗಂಡಸರ ಜತೆ ಹೊರ ಊರಿಗೂ ಹೋಗುತ್ತಾರೆ. ಕಾಡಿನಿಂದ ಆರಿಸಿ ತರುವ ಮರಮಟ್ಟುಗಳಿಗೆ ಒಳ್ಳೆಯ ದರ ಸಿಗುವ ಮಿಲ್ ಹುಡುಕಿಕೊಂಡು ದೂರದೂರಿಗೂ ತೆರಳುತ್ತಾರೆ. ಕಳ್ಳಕಾಕರು ಮನೆಗೆ ನುಗ್ಗಿದರೆ ಏನು ಮಾಡೋದು ಎಂಬ ಅಂಜಿಕೆ ಈಗ ಈ ಮಹಿಳೆಯರಿಗಿಲ್ಲ.
ಇನ್ನು, ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್ ( ಎನ್‌ಆರ್‌ಎಲ್‌ಎಂ)ನಡಿ ಪಡೆದ ಬಂದೂಕು ಬಳಕೆಯ ಬಗ್ಗೆ ತರಬೇತಿ ಹೇಗೆ ಪಡೆದರೆಂಬುದು ಇನ್ನೊಂದು ಅಂಶ .ಬಂದೂಕನ್ನು ಹೇಗೆ ಎತ್ತಿಕೊಳ್ಳಬೇಕು, ಯಾವ ತೆರ ಹಿಡಿಯಬೇಕು ಮತ್ತು ಯಾವ ತೆರ ಬಳಕೆ ಇತ್ಯಾದಿಗಳನ್ನು ಡೀಲರ್ ಕಲಿಸಿಕೊಟ್ಟ. ನಂತರದ ದಿನಗಳಲ್ಲಿ ಈ ಮಹಿಳೆಯರು ಮರದ ಟೊಂಗೆಗೆ, ಮರಗಳಲ್ಲಿ ನೇತಾಡುವ ಹಣ್ಣುಗಳಿಗೆ ಗುರಿಯಿಟ್ಟು ಶೂಟ್ ಮಾಡುವ ಮೂಲಕ ಬಂದೂಕು ಬಳಕೆಯಲ್ಲಿ ಸ್ವಯಂ ಪರಿಣಿತರಾದರು.

 

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss