ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಪ್ರತಿಮೆ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಎನ್. ಎ. ಹ್ಯಾರಿಸ್ ನಿವಾಸದ ಮುಂದೆ ಡಾ.ರಾಜ್ ಕುಮಾರ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ನಡೆದ ಘಟನೆ ಏನು?
ದೊಮ್ಮಲೂರಿನಲ್ಲಿ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಹ್ಯಾರಿಸ್ ರಾಜ್ ಕುಮಾರ್ ಪ್ರತಿಮೆ ವಿಚಾರವಾಗಿ ತಮ್ಮ ಸಂಗಡಿಗರೊಂದಿಗೆ ಮಾತಾಡಿದ್ದರು. ‘ರೋಡಲ್ಲಿ ಪ್ರತಿಮೆ ಯಾಕೆ ಇಡ್ತಾರೆ. ರಾಜ್ ಕುಮಾರ್ ಪ್ರತಿಮೆ ಇಡೋದೆ ದೊಡ್ಡ ಕಥೆ. ಪ್ರತಿಮೆಗೆ ಪ್ರೊಟೆಕ್ಷನ್ ಬೇಕು ಅಂದ್ರೆ ಮನೆಯಲ್ಲಿ ಇಟ್ಟುಕೊಳ್ಳಬೇಕು” ಎಂಬಿತ್ಯಾದಿ ಮಾತುಗಳನ್ನಾಡಿದ್ದರು.
ಹ್ಯಾರಿಸ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಅಣ್ಣಾವ್ರು ಕರ್ನಾಟಕ ಮತ್ತು ಕನ್ನಡಿಗರ ಸ್ವಾಭಿಮಾನದ ಪ್ರತೀಕ. ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಬಾರದು ಅಂತ ಹೇಳುವ ನೈತಿಕತೆ ನಿಮಗೂ ಸೇರಿ ಇಲ್ಲಿ ಯಾರಿಗೂ ಇಲ್ಲ. ನಾವು ಎಲ್ಲಿ ಬೇಕಾದರೂ ಪ್ರತಿಷ್ಠಾಪನೆ ಮಾಡುತ್ತೇವೆ, ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಹ್ಯಾರಿಸ್ ಅವರನ್ನು ರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಕ್ಷಮೆ ಕೇಳಿದ್ದರು..
ನಂತರ ಶಾಸಕ ಹ್ಯಾರೀಸ್ ಯೂಟರ್ನ್ ತೆಗೆದುಕೊಂಡು, ನಾನು ಹಾಗೆ ಮಾತನಾಡೇ ಇಲ್ಲ. ಯಾರೋ ವಿಡಿಯೋವನ್ನು ಎಡಿಟ್ ಮಾಡಿದ್ದಾರೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೂಡ ಕೇಳಿದ್ದರು.
ಈ ಬಳಿಕವೂ ಹ್ಯಾರೀಸ್ ಅವರ ಬೆಂಗಳೂರಿನ ಶಾಂತಿನಗರದಲ್ಲಿರುವ ನಿವಾಸದ ಮುಂದೆ ರಾಜ್’ಕುಮಾರ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದು, ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.