ಮಂಡ್ಯ : ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರು ದೇಶ ಹಾಗೂ ಜಗತ್ತಿನಲ್ಲಿ ತಮ್ಮ ವೃತ್ತಿಗಾಗಿ ದೊಡ್ಡ ಹೆಸರು ಮಾಡಿದ ಮಹನೀಯರು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ತಿಳಿಸಿದರು.
ನಗರದ ಕರ್ನಾಟಕ ಸಂಘದಲ್ಲಿ ಮಂಡ್ಯ ಮಧುರ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಅಭಿಯಂತರರ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಧಾಕೃಷ್ಣನ್ ಅವರು ಮೂಲತಃ ಶಿಕ್ಷಕರಾಗಿ ತತ್ವಶಾಸ್ತ್ರದಲ್ಲಿ ಅಧ್ಯಯನ ಮಾಡಿ ಅಪಾರ ಪಾಂಡಿತ್ಯ ಗಳಿಸಿದವರು. ಶಿಕ್ಷಕ ದೇಶದಲ್ಲಿ ಏನೆಲ್ಲಾ ಆಗಬೇಕು ಎಂಬುದನ್ನು ತೋರಿಸಿಕೊಟ್ಟ ತತ್ವಜ್ಞಾನಿ ಎಂದು ಹೇಳಿದರು.
ಸರ್ ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದವರು. ಬಡತನದಲ್ಲಿ ಓದಿ ಇಂಜಿನಿಯರ್ ಆಗಿ ಎಲ್ಲಾ ಹಂತದ ಸ್ತರಗಳಲ್ಲಿ ಕೆಲಸ ಮಾಡಿದವರು. ಯಧುವಂಶದ ಒತ್ತಾಸೆಯಾಗಿ ಅಭಿವೃದ್ಧಿ ಕೆಲಸಗಳಿಗೆ ಮಾರ್ಗದರ್ಶನ ಮಾಡಿದವರು ಎಂದು ಬಣ್ಣಿಸಿದರು.
ಸರ್ ಎಂ.ವಿ. ಅವರ ಸಾಧನೆ ಅದ್ವಿತೀಯವಾದದ್ದು. ಡಾ. ರಾಧಾಕೃಷ್ಣನ್ ಮತ್ತು ವಿಶ್ವೇಶ್ವರಯ್ಯ ಇಬ್ಬರೂ ಸಹ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಮೇರು ವ್ಯಕ್ತಿತ್ವದಿಂದ ಕೂಡಿದವರು ಎಂದು ತಿಳಿಸಿದರು.