Thursday, July 7, 2022

Latest Posts

ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ನಡೆದ ಗಲಭೆ ಖಂಡಿಸಲು ದಮ್ಮಿಲ್ಲ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಮತಾಂಧ ಕೆಲ ಮುಸ್ಲಿಮರ ಬಗ್ಗೆ ಸಹಾನುಭೂತಿ ತೋರಿಸುತ್ತಿರುವ ಕಾಂಗ್ರೆಸ್ ಮುಖಂಡರಾದ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ನಡೆದ ಗಲಬೆ ಹಾಗೂ ಶೃಂಗೇರಿಯ ಶಂಕರಾಚಾರ್ಯರ ಪ್ರತಿಮೆಗೆ ಎಸ್ ಡಿ ಪಿ ಐ ಧ್ವಜ ಹಾಕಿರುವುದನ್ನು ಖಂಡಿಸಲು ದಮ್ಮಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹರಿಹಾಯ್ದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವ್ಯವಸ್ಥಿತವಾಗಿ ನಡೆಸಿದ ಗಲಬೆಯನ್ನು ಈ ಇಬ್ಬರು ನಾಯಕರು ಈ ನಿಮಿಷದವರೆಗೆ ಖಂಡಿಸಿಲ್ಲ. ತಮ್ಮದೇ ಶಾಸಕ ಆಖಂಡ ಶ್ರೀನಿವಾಸ ಮೂರ್ತಿ ಇನ್ನು 10ನಿಮಿಷ ಇದ್ದಿದ್ದರೆ ತಮ್ಮ ಕೊಲೆಯಾಗುತ್ತಿತ್ತು ಎಂದು ಹೇಳಿದ್ದಾರೆ. ಆದರೆ ಅವರಿಂದ ಇದುವರೆಗೂ ಪೊಲೀಸ್ ದೂರು ಕೊಡಿಸಿಲ್ಲ ಎಂದರು.

ಗಲಬೆಕೋರರು ಪೊಲೀಸರನ್ನೇ ಕೊಲ್ಲಿ ಎಂದು ಹೇಳಿರುವುದು ರೆಕಾರ್ಡ್ ಆಗಿದೆ. ಶಾಸಕರ ಮನೆಗೆ ಬೆಂಕಿ ಹಚ್ಚಿ ವಸ್ತ್ರಾಭರಣ ದೋಚಲಾಗಿದೆ. ಅಮಾಯಕರ ವಾಹನಗಳನ್ನು ಸುಡಲಾಗಿದೆ. ಇಂತಹ ಕೃತ್ಯ ವನ್ನು ನೋಡಿಕೊಂಡು ಮೌನವಾಗಿದ್ದಾರೆ. ರಾಷ್ಟ್ರೀಯ ಮೌಲ್ಯದ ರಾಜಕಾರಣ ಮಾಡದೆ ಕೀಳು ಅಭಿರುಚಿಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಕೋಮು ಗಲಬೆ ಎಂದು ಹೇಳುವ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಪಾಠ ಮಾಡಬೇಕಿದೆ. ಸಿಎಂ ಆದವರಿಗೆ ಕೋಮು ಗಲಬೆ ಬಗ್ಗೆ ಗೊತ್ತಿಲ್ಲ ಎಂದರೆ ಏನರ್ಥ. ಗಲಾಟೆಯಲ್ಲಿ ಒಬ್ಬ ಹಿಂದೂ ಕೂಡ ಹೋಗಿಲ್ಲ. ರಾತ್ರಿವರೆಗೂ ಕಾದು ಗಲಬೆಕೋರರು ಬೆಂಕಿ ಹಚ್ಚಿದ್ದಾರೆ ಎಂದರು.

ದೇಶಕ್ಕಾಗಿಯೇ ಇಡೀ ಜೀವನ ತ್ಯಾಗ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಟ್ವೀಟ್ ಮಾಡಿರುವುದು ಖಂಡನೀಯ. ದಲಿತ ವಿರೋಧಿ ಸಂತೋಷ್ ಎಂದು ಹೇಳಲು ಸಿದ್ದರಾಮಯ್ಯಗೆ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

ದಲಿತ ಶಾಸಕರಿಗೆ ರಕ್ಷಣೆ ನೀಡಲು ಕಾಂಗ್ರೆಸ್ ನಿಂದ ಆಗಿಲ್ಲವೆಂದು ಸಂತೋಷ್ ಟ್ವೀಟ್ ಮಾಡಿದ್ದಾರೆ ಇದರಲ್ಲಿ ದಲಿತ ವಿರೋಧಿ ನೀತಿ ಎಲ್ಲಿದೆ ಎಂದು ಪ್ರಶ್ನಿಸಿದರು.

ಜಮೀರ್ ಅಹಮ್ಮದ್ ಒಬ್ಬ ಸಂಪೂರ್ಣ ರಾಷ್ಟ್ರದ್ರೋಹಿ. ದಂಗೆ ಎಬ್ಬಿಸಿ ಲೀಡರ್ ಆಗಲು ಹವಣಿಸುವ ಮುಸಲ್ಮಾನ್ ವ್ಯಕ್ತಿಗಳಲ್ಲಿ ಈತನು ಒಬ್ಬ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಂಗೆ ನಡೆಸುತ್ತಿರುವ ಎಸ್ ಡಿ ಪಿ ನಿಷೇಧಕ್ಕೆ ಚಿಂತನೆ ನಡೆಸಲಾಗಿದೆ. ದಂಗೆಕೋರರಿಂದ ನಷ್ಟ ವಸೂಲಿ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss