Saturday, August 13, 2022

Latest Posts

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಇದುವರೆಗಿನ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ

ಮಡಿಕೇರಿ: ಮಂಗಳೂರಿನ ಡಿವೈಎಸ್‍ಪಿ ಮಾದಪಂಡ ಗಣಪತಿ ಸಾವಿನ ಪ್ರಕರಣದಲ್ಲಿ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಕೆ.ಜೆ. ಜಾರ್ಜ್‍ಗೆ ಮತ್ತೆ ಸಂಕಷ್ಟ ಎದುರಾಗಿದೆ. ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ ಮತ್ತೆ ಚುರುಕು ಪಡೆದಂತೆ ಕಾಣುತ್ತಿದ್ದು, ಚೆನ್ನೈ ಸಿಬಿಐ ತನಿಖಾ ತಂಡ ಸಲ್ಲಿಸಿದ ‘ಬಿ’ ರಿಪೋರ್ಟ್ ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತಿರಸ್ಕರಿಸಿರುವುದಾಗಿ ತಿಳಿದು ಬಂದಿದೆ.
ಡಿವೈಎಸ್‍ಪಿ ಗಣಪತಿ ಸಾವಿಗೆ ಯಾವುದೇ ಪ್ರಚೋದನೆ ಇರಲಿಲ್ಲ ಎಂದು ಸಿಬಿಐ ಬಿರಿಪೋರ್ಟ್ನಲ್ಲಿ ನೀಡಿದ್ದ ಹೇಳಿಕೆಗೆ ಗಣಪತಿ ಪುತ್ರ ನಿಹಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ತನ್ನ ತಂದೆಯ ಆತ್ಮಹತ್ಯೆಗೆ ಕೆಲವರ ಪ್ರಚೋದನೆ ಇದೆ ಎಂದು ಪುತ್ರ ನಿಹಾಲ್ ಗಣಪತಿ ಕೋರ್ಟಿಗೆ ಅರ್ಜಿ ಸಲ್ಲಿಸಿರುವುದರಿಂದ ಇದೀಗ ಪ್ರಕರಣ ಮತ್ತೆ ಜೀವ ಪಡೆದಿದೆ.
ಅಂದು ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್, ಪ್ರಣಬ್ ಮೊಹಂತಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಮತ್ತೆ ನೊಟೀಸ್ ಜಾರಿಗೊಳಿಸಲಾಗಿದೆ. ಸೆಪ್ಟಂಬರ್ 28ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಕೋರ್ಟ್‍ಗೆ ಹಾಜರಾಗಲೇಬೇಕಾದ ಸಂದಿಗ್ಧತೆ ಮಾಜಿ ಸಚಿವ ಜಾರ್ಜ್ ಹಾಗೂ ಅಧಿಕಾರಿಗಳಿಗೆ ಎದುರಾಗಿದೆ.
ಸಿಬಿಐ ವರದಿ ಸಲ್ಲಿಕೆ: 2017ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ತಲ್ಲಣಗೊಳಿಸಿದ್ದ ಡಿವೈಎಸ್‍ಪಿ ಮಾದಪಂಡ ಗಣಪತಿ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಚೆನ್ನೈನ ಸಿ.ಬಿ.ಐ ತಂಡ ತನಿಖೆ ಪೂರ್ಣಗೊಳಿಸಿ, 2019ರ ಅಕ್ಟೋಬರ್ 30ರಂದು ಸಮಗ್ರ ತನಿಖಾ ವರದಿಯನ್ನು ಮಡಿಕೇರಿಯ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಚೆನ್ನೈ ಸಿಬಿಐ ತಂಡದ ಡಿವೈಎಸ್‍ಪಿ ರವಿ ಮತ್ತು ಸಿಬಿಐನ ಸರಕಾರಿ ವಕೀಲ ಸುಬೋದ್ ನೇತೃತ್ವದಲ್ಲಿ ಕೋರ್ಟ್‍ಗೆ ಆಗಮಿಸಿದ 4 ಮಂದಿ ಸಿಬಿಐ ಅಧಿಕಾರಿಗಳ ತಂಡ ತೆರೆದ ಕೋರ್ಟ್‍ನಲ್ಲಿ ಒಟ್ಟು 262 ಪುಟಗಳ ಸುದೀರ್ಘ ತನಿಖಾ ವರದಿಯನ್ನು ಸಲ್ಲಿಸಿದ್ದರು. ಮೊದಲಿಗೆ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಸಿದ ಸಿಬಿಐ ಅಧಿಕಾರಿಗಳ ತಂಡ, ಬಳಿಕ ತಮ್ಮ ವಕೀಲರ ಮೂಲಕ ತನಿಖಾ ವರದಿಯನ್ನು ಕೋರ್ಟ್‍ಗೆ ಹಸ್ತಾಂತರಿಸಿತ್ತು. ಬಳಿಕ ನ್ಯಾಯಾಲಯದ ನಿಯಮದಂತೆ ಸಿಬಿಐ ತಂಡ ನೀಡಿದ 262 ಪುಟಗಳ ವರದಿಯನ್ನು ವಿಸ್ತೃತವಾಗಿ ಪರಿಶೀಲಿಸಿ ಅಂಗೀಕರಿಸಲಾಗಿತ್ತು.
ಡಿವೈಎಸ್‍ಪಿ ಗಣಪತಿ ಸಾವಿನ ಕುರಿತಂತೆ ಮೃತರ ಸಂಬಂಧಿಕರು ಮಡಿಕೇರಿ ಜೆಎಂಎಫ್‍ಸಿ ಕೋರ್ಟ್‍ನ ಮೊರೆ ಹೋಗಿ ನಗರ ಪೊಲೀಸರಿಗೆ ಪ್ರಕರಣದ ಕುರಿತು ಎಫ್.ಐ.ಆರ್ ದಾಖಲಿಸಲು ಸೂಚಿಸುವಂತೆ ಮನವಿ ಮಾಡಿದ್ದರು. ಈ ಸಂದರ್ಭ ಅಂದಿನ ನ್ಯಾಯಮೂರ್ತಿಗಳಾದ ಅನ್ನಪೂರ್ಣೇಶ್ವರಿ ಅವರು, ನಗರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಸೂಚಿಸಿದ್ದರು. ಆ ಸಮಯದಲ್ಲಿ ರಾಜ್ಯ ಸರಕಾರ ಸಿಓಡಿ ತಂಡಕ್ಕೆ ತನಿಖೆಯನ್ನು ಹಸ್ತಾಂತರಿಸಿದ್ದ ಹಿನ್ನಲೆಯಲ್ಲಿ ನಗರ ಪೊಲೀಸರು ತನಿಖೆಯನ್ನು ನಡೆಸಿರÀಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಂದು ಸಿಬಿಐ ಅಧಿಕಾರಿಗಳ ತಂಡ ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರನ್ನು ಕೋರ್ಟ್‍ಗೆ ಕರೆಸಿಕೊಂಡು ಅಂತಿಮ ತನಿಖಾ ವರದಿಯನ್ನು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತಿರುವುದಾಗಿ ಮಾಹಿತಿ ನೀಡಿದ್ದರು.
ಸುಪ್ರಿಂ ಕೋರ್ಟ್‍ನ ನಿರ್ದೇಶನದಂತೆ ತನಿಖೆಯನ್ನು ಕೈಗೆತ್ತಿಕೊಂಡ ಚೆನೈ ಸಿ.ಬಿ.ಐ ತಂಡ ಕಳೆದ 2 ವರ್ಷಗಳಿಂದ ಹಲವು ಬಾರಿ ಕೊಡಗಿಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿತ್ತು. ನಡುವೆ ಅಂತಿಮ ವರದಿ ಸಲ್ಲಿಸಲು ಸಿಬಿಐ ತಂಡ ಸಮಯಾವಕಾಶ ಕೋರಿದ್ದ ಹಿನ್ನಲೆಯಲ್ಲಿ ಅಂತಿಮ ವರದಿ ತಡವಾಗಿ ಸಲ್ಲಿಸಲಾಗಿತ್ತು ಎನ್ನಲಾಗಿದೆ.
ಪ್ರಕರಣದ ಹಿನ್ನಲೆ:
ಮೂಲತಃ ಕುಶಾಲನಗರ ಸಮೀಪದ ನಂಜರಾಯಪಟ್ಟಣದ ನಿವಾಸಿ ಮಾದಪಂಡ ಗಣಪತಿ ಮಂಗಳೂರು ವಲಯ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಡಿವೈಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಮಾದಪಂಡ ಗಣಪತಿ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಲ್ಲಿ ಇಲಾಖಾ ತನಿಖೆ ನಡೆಸಲಾಗಿತ್ತು.
ತನ್ನ ಸೇವಾ ಅವಧಿಯಲ್ಲಿ ದಕ್ಷತೆ ಮತ್ತು ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದರೂ ಮೇಲಧಿಕಾರಿಗಳ ವರ್ತನೆ ಮಾದಪಂಡ ಗಣಪತಿ ಅವರಿಗೆ ಕಿರುಕುಳ ಉಂಟು ಮಾಡಿತ್ತು. ಮಾತ್ರವಲ್ಲದೆ ಮಂಗಳೂರಿನ ಚರ್ಚ್‍ವೊಂದರಲ್ಲಿ ನಡೆದ ಗಲಭೆ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿ ಶಾಂತಿ ನೆಲೆಸುವಂತೆ ಮಾಡಿದ್ದ ಮಾದಪಂಡ ಗಣಪತಿ, ಈ ಪ್ರಕರಣದಲ್ಲಿ ಸಚಿವರು ಮತ್ತು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗಿದೆ. ಮಾತ್ರವಲ್ಲದೆ ಪೊಲೀಸ್ ಇಲಾಖೆ ಒಳಗಿನ ಕೆಲವು ವ್ಯವಸ್ಥೆಗಳನ್ನು ಗಣಪತಿ ತೀವ್ರ ವಿರೋಧಿಸುತ್ತಿದ್ದುದು ಕೂಡ ಇಲಾಖೆ ಒಳಗೆ ಗಣಪತಿ ಅವರನ್ನು ಮೂಲೆ ಗುಂಪು ಮಾಡಲು ಕಾರಣವಾಗಿತ್ತೆಂದು ಹೇಳಲಾಗಿದೆ. ಇದರಿಂದಾಗಿ ಮಾದಪಂಡ ಗಣಪತಿ ಮಾನಸಿಕವಾಗಿ ನೊಂದಿದ್ದಲ್ಲದೆ, ಈ ವಿಚಾರಗಳನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಕೂಡ. ಮೇಲಧಿಕಾರಿಗಳ ವಿರೋಧ ಕಟ್ಟಿಕೊಂಡು, ಸಹಾಯ ಮಾಡುವ ಸ್ಥಿತಿಯಲ್ಲೂ ಗಣಪತಿ ಅವರ ಆಪ್ತ ವರ್ಗ ಇರಲಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ 2017ರ ಜುಲೈ 7ರಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಮಡಿಕೇರಿಗೆ ಆಗಮಿಸಿದ್ದ ಡಿವೈಎಸ್‍ಪಿ ಗಣಪತಿ, ನಗರದ ವಿನಾಯಕ ಲಾಡ್ಜ್‍ನ 315ನೇ ನಂಬರ್‍ನ ಕೊಠಡಿ ಪಡೆದುಕೊಂಡಿದ್ದರು. ಆ ಬಳಿಕ ತಮ್ಮ ಬಳಿಯಿದ್ದ ವಿವಿಧ ದಾಖಲೆಗಳ ಸಹಿತ ಸಮವಸ್ತ್ರದಲ್ಲೇ ಆಟೋ ಒಂದರಲ್ಲಿ ಜಿಲ್ಲೆಯ ಖಾಸಗಿ ಸುದ್ದಿವಾಹಿನಿ ಕಚೇರಿಗೆ ತೆರಳಿದ್ದರು.
ಗಣಪತಿ ಆರೋಪ: ಸುದ್ದಿ ವಾಹಿನಿಯ ಸ್ಟುಡಿಯೋಗೆ ಬಂದ ಡಿವೈಎಸ್‍ಪಿ ಗಣಪತಿ, ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಗುಪ್ತಚರ ಇಲಾಖೆಯ ಪ್ರಣವ್ ಮೋಹಂತಿ ವಿರುದ್ಧ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಇಲಾಖೆ ಒಳಗಿನ ಕಿರುಕುಳ, ಹಳೆಯ ಪ್ರಕರಣವೊಂದರಲ್ಲಿ ತಪ್ಪಿಲ್ಲದಿದ್ದರೂ ತನ್ನನ್ನು ಸಿಲುಕಿಸುವ ಪ್ರಯತ್ನ, ಚರ್ಚ್ ಗಲಭೆ ವಿಚಾರದಲ್ಲಿ ಕಿರುಕುಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆರೋಪಿಸಿದ್ದರು. ಮಾತ್ರವಲ್ಲದೆ ತನ್ನ ಜೀವಕ್ಕೆ ಹಾನಿಯಾದರೆ ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೇ ನೇರ ಕಾರಣವೆಂದು ಸ್ಪಷ್ಟ ಹೇಳಿಕೆ ನೀಡಿದ್ದರು.
ಈ ಎಲ್ಲಾ ಆರೋಪಗಳನ್ನು ಸುದ್ದಿ ವಾಹಿನಿ ತನ್ನ ಕ್ಯಾಮರಾದಲ್ಲಿ ದಾಖಲಿಸಿಕೊಂಡಿತ್ತಲ್ಲದೆ, ಯಥಾ ಪ್ರಕಾರವೇ ಕೆಲವೇ ಸಮಯಗಳಲ್ಲಿ ಪ್ರಸಾರ ಮಾಡಿತ್ತು. ಆ ಹೊತ್ತಿಗಾಗಲೇ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಡಿವೈಎಸ್‍ಪಿ ಗಣಪತಿ ಬೇರೆ ಊರಿಗೆ ತೆರಳಿರುವ ಮಾಹಿತಿ ಕೊಡಗು ಪೊಲೀಸ್ ಮೂಲಗಳಿಗೆ ರವಾನೆಯಾಗಿತ್ತು. ಡಿವೈಎಸ್‍ಪಿ ಗಣಪತಿ ಅವರ ಮೊಬೈಲ್ ಸಂಖ್ಯೆಯ ಜಾಡು ಹಿಡಿದ ಮಡಿಕೇರಿ ನಗರ ಪೊಲೀಸರು, ಸಂಜೆ 6 ಗಂಟೆ ವೇಳೆಗೆ ಮಡಿಕೇರಿಯಲ್ಲಿರುವುದನ್ನು ಪತ್ತೆ ಹಚ್ಚಿದರು.
ಡಿವೈಎಸ್‍ಪಿ ಗಣಪತಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾದ ಮಡಿಕೇರಿ ನಗರ ಪೊಲೀಸರು, ಅಂತಿಮವಾಗಿ ವಿನಾಯಕ ಲಾಡ್ಜ್‍ಗೆ ತೆರಳಿ ಡಿವೈಎಸ್‍ಪಿ ಗಣಪತಿ ರೂಂ ಪಡೆದಿರುವುದನ್ನು ಪತ್ತೆ ಹಚ್ಚಿದ್ದರು. ಪಕ್ಕದಲ್ಲಿದ್ದ ಕಿಟಕಿಯಿಂದ ನೋಡಿದ ಸಂದರ್ಭ ಡಿವೈಎಸ್‍ಪಿ ಗಣಪತಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿತ್ತು. ಆ ಬಳಿಕ ಮೃತರ ಪೋಷಕರ ಸಮ್ಮುಖದಲ್ಲಿ ವಿನಾಯಕ ಲಾಡ್ಜ್‍ನ ರೂಂ ನಂಬರ್ 315ರ ಬಾಗಿಲು ಒಡೆದು ಒಳ ತೆರಳಿದ ಪೊಲೀಸರು, ಮೃತರ ಪೋಷಕರ ಸಮ್ಮುಖದಲ್ಲಿ ಮೃತದೇಹವನ್ನು ಕೆಳಗಿಳಿಸಿ ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದರು.
ಕಾನೂನು ಪ್ರಕ್ರಿಯೆ-ತನಿಖೆ: ಡಿವೈಎಸ್‍ಪಿ ಗಣಪತಿ ಸಾವಿಗೆ ಅವರ ಅಂತಿಮ ಹೇಳಿಕೆಯಂತೆ ಗೃಹ ಸಚಿವ ಕೆ.ಜೆ. ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಎಡಿಜಿಪಿ ಎ.ಎಂ. ಪ್ರಸಾದ್ ಮತ್ತು ಪ್ರಣವ್ ಮೋಹಂತಿ ಕಾರಣವೆಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತಲ್ಲದೆ, ಈ ವಿಚಾರ ರಾಜ್ಯವ್ಯಾಪಿ ತೀವ್ರ ಸ್ವರೂಪ ಪಡೆದು, ರಾಜ್ಯ ಸರಕಾರವನ್ನೇ ತಲ್ಲಣಗೊಳಿಸಿತ್ತು.
ಆ ಬಳಿಕ ಗೃಹ ಸಚಿವ ಸ್ಥಾನಕ್ಕೆ ಕೆ.ಜೆ.ಜಾರ್ಜ್ ರಾಜಿನಾಮೆ ನೀಡಿದ್ದರೆ, ಹಿರಿಯ ಐಪಿಎಸ್ ಅಧಿಕಾರಿಗಳನ್ನು ರಜೆಯ ಮೇಲೆ ಕಳುಹಿಸಿ ರಾಜ್ಯದ ಅಂದಿನ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಸಿಓಡಿಗೆ ಒಪ್ಪಿಸಿತ್ತು.
ಬಹಿರಂಗವಾಗದ ವರದಿ: ತನಿಖೆ ನಡೆಸಿದ ಸಿ.ಓ.ಡಿ, ಡಿವೈಎಸ್‍ಪಿ ಗಣಪತಿ ಸಾವು ಆತ್ಮಹತ್ಯೆ ಎಂದು ಹೇಳಿತ್ತಲ್ಲದೆ ಸಚಿವರು ಮತ್ತು ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿತ್ತು. ಆ ಬಳಿಕ ರಾಜ್ಯ ಹೈಕೋರ್ಟ್ ಮೊರೆ ಹೋದ ಗಣಪತಿ ಕುಟುಂಬಸ್ಥರು, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದರು. ಬಳಿಕ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಕೆ.ಎನ್.ಕೇಶವ ನಾರಾಯಣ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿತ್ತು. ವಿಚಾರಣೆ ನಡೆಸಿದ ಆಯೋಗ ನೂರಕ್ಕೂ ಹೆಚ್ಚು ಸಾಕ್ಷಿಗಳು, ವಿವಿಧ ದಾಖಲೆಗಳ ಸಹಿತ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದು, ಆ ವರದಿ ಇಂದಿಗೂ ಎಲ್ಲಿಯೂ ಬಹಿರಂಗಗೊಂಡಿಲ್ಲ.
ಸುಪ್ರೀಂಗೆ ಮೊರೆ: ಈ ಬೆಳವಣಿಗೆಗಳ ನಡುವೆ ಡಿವೈಎಸ್‍ಪಿ ಮಾದಪಂಡ ಗಣಪತಿ ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿ ಪ್ರಕರಣದ ಸತ್ಯಾಂಶ ಹೊರಬರಲು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ತನ್ನ ಮೇಲ್ವಿಚಾರಣೆಯಲ್ಲಿ ಚೆನ್ನೈ ಸಿಬಿಐ ತಂಡ ಪ್ರಕರಣವನ್ನು ತನಿಖೆ ನಡೆಸುವಂತೆ ಆದೇಶಿಸಿತ್ತು. 2017ರ ನವೆಂಬರ್ ತಿಂಗಳಿನಿಂದ 2019ರ ಅಕ್ಟೋಬರ್ 30ರವರೆಗೆ ಈ ಪ್ರಕರಣವನ್ನು ತನಿಖೆ ನಡೆಸಿದ ಚೆನ್ನೈ ಸಿಬಿಐ ತಂಡ ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಸಾಕ್ಷಿ ಕಲೆ ಹಾಕುವ ಕಾರ್ಯವನ್ನು ಮಾಡಿತ್ತು. ರಾಜ್ಯ ಸಿಓಡಿ, ನಿವೃತ್ತ ನ್ಯಾಯಮೂರ್ತಿ ಕೇಶವ ನಾರಾಯಣ ಸಮಿತಿಯ ವರದಿಯನ್ನೂ ಪಡೆದಿತ್ತು.
ಬುಡಮಟ್ಟದಿಂದಲೇ ಪ್ರಕರಣದ ಬೆನ್ನು ಹತ್ತಿದ್ದ ಸಿಬಿಐ ತಂಡ, ಮಡಿಕೇರಿಯ ಟಿ.ವಿ. ಒನ್ ಚಾನಲ್‍ನ ಸಿಇಓ ಹೆಚ್.ಎಸ್. ಪ್ರಸಾದ್ ಅವರನ್ನು ಹಲವು ಬಾರಿ ವಿಚಾರಣೆ ನಡೆಸಿತ್ತಲ್ಲದೆ, ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿತ್ತು. ಚಾನಲ್‍ನಲ್ಲಿ ನೀಡಲಾದ ಹೇಳಿಕೆ, ಚಾನಲ್‍ನಲ್ಲಿ ಪ್ರಸಾರ ಮಾಡಲಾದ ವಿಡಿಯೋ ತುಣುಕನ್ನು ವಶಕ್ಕೆ ಪಡೆದುಕೊಂಡಿತ್ತಲ್ಲದೆ, ಮೃತರ ಸಂಬಂಧಿಕರ ಹೇಳಿಕೆ, ನಂಜರಾಯಪಟ್ಟಣ, ಮಂಗಳೂರು, ಕೇರಳದ ಖಾಸಗಿ ರೆಸಾರ್ಟ್‍ನಲ್ಲೂ ಪರಿಶೀಲನೆ ನಡೆಸಿತ್ತು.
ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಡಿಕೇರಿಯ ಜೆಎಂಎಫ್‍ಸಿ ಕೋರ್ಟ್‍ಗೆ 2019ರ ಅಕ್ಟೋಬರ್ 30ರಂದು ತಮ್ಮ ವರದಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ಹೆಸರು ಕೇಳಿ ಬಂದಿದ್ದ ಹಿನ್ನಲೆಯಲ್ಲಿ ಬಳಿಕ ಕಾನೂನು ಪ್ರಕ್ರಿಯೆಯಂತೆ ಈ ಪ್ರಕರಣವನ್ನು ಮಡಿಕೇರಿಯಿಂದ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಜನಪ್ರತಿನಿಧಿಗಳ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.
ಫೋಟೋ: ಮಡಿಕೇರಿ ಜೆಎಂಎಫ್‍ಸಿ ಕೋರ್ಟ್‍ಗೆ ಸಿಬಿಐ ತನಿಖಾ ತಂಡ ಬಿ ರಿಪೋರ್ಟ್ ನೀಡಿ ಹೊರಬರುತ್ತಿರುವುದು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss