ಹೊಸ ದಿಗಂತ ವರದಿ, ಶಿವಮೊಗ್ಗ :
ಪ್ರಸ್ತುತ ಡಿಸಿಸಿ ಬ್ಯಾಂಕ್ನಿಂದ 1 ಲಕ್ಷ ರೈ ತರಿಗೆ 720 ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀಶಕ್ತಿ ಸಂಘಗಳಿಗೆ 70 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.
ಸಹಕಾರ ಕ್ಷೇತ್ರಲ್ಲಿ ಸದಸ್ಯರೇ ಅದರ ಮಾಲೀಕರು. ಸಹಕಾರ ಕ್ಷೇತ್ರ ಬೆಳೆದಂತೆ ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಬಲ ಬರಲು ಸಾಧ್ಯವಾಗುತ್ತದೆ ಎಂದರು.
ರಾಜ್ಯದಲ್ಲಿ ಸಹಕಾರ ಕ್ಷೇತ್ರ ಪ್ರಬಲವಾಗಿದೆ. ಜಿಲ್ಲೆಯಲ್ಲೂ ಸಹ ಈ ಕ್ಷೇತ್ರ ಅಭಿವೃದ್ಧಿಯ ಹಾದಿಯಲ್ಲಿದೆ ಎಂದ ಅವರು, ಮುಂಬರುವ ದಿನಗಳಲ್ಲಿ ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾರಂದ ಅಧ್ಯಕ್ಷತೆಯನ್ನು ಹೆಚ್.ಎಲ್. ಷಡಾಕ್ಷರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ಎಲ್. ಜಗದೀಶ್, ಎಸ್.ಪಿ.ಶೇಷಾದ್ರಿ, ಪಿ.ವೀರಪ್ಪ ವೊದಲಾದವರಿದ್ದರು.