ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಭರಮಸಾಗರ ಹೋಬಳಿಯ ೪೩ ಕೆರೆಗಳಿಗೆ ಡಿಸೆಂಬರ್ ಒಳಗೆ ರಾಜನಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಲಾಗುವುದು ಎಂದು ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕರಾದ ಎಂ.ಚಂದ್ರಪ್ಪ ಹೇಳಿದರು.
ಭರಮಸಾಗರ ಸಮೀಪದ ಹೆಬ್ಬಾಳ್ ಟೋಲ್ ಬಳಿ ಶುಕ್ರವಾರ ರಾಜನಹಳ್ಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದ ಅವರು, ಭರಮಸಾಗರ ಹೋಬಳಿಯ ೪೩ ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳ್ಳಿ ಏತ ನೀರಾವರಿ ಯೋಜನೆ ಮಂಜೂರಾಗಿ ಐದು ತಿಂಗಳಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿಯೂ ಈ ಯೋಜನೆಯ ಕಾಮಗಾರಿ ಉತ್ತಮವಾಗಿ ನಡೆಯುತ್ತಿದೆ ಎಂದರು.
ಈ ಯೋಜನೆಯಡಿ ಈಗಾಗಲೇ ಜಾಕ್ವೆಲ್ ಕೆಲಸ ಮುಕ್ತಾಯವಾಗಿದ್ದು, ಇನ್ನೂ ೨ ರಿಂದ ೩ ತಿಂಗಳೊಳಗೆ ಮಳೆಗಾಲ ಮುಗಿಯುವುದರೊಳಗೆ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು. ಈ ಯೋಜನೆಗೆ ಕೆಲವು ಸಣ್ಣಪುಟ್ಟ ಸಮಸ್ಯೆಗಳಿವೆ. ಈ ಯೋಜನೆಗೆ ಸಂಬಂಧಪಟ್ಟಂತೆ ಇರುವ ಎಲ್ಲಾ ಆಡಚಣೆಗಳನ್ನು ನಿವಾರಿಸಿ, ಆದಷ್ಟು ಶೀಘ್ರದಲ್ಲಿ ಭರಮಸಾಗರ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿದರು.
ಸಿರಿಗೆರೆ ಶ್ರೀಗಳ ಆಶೀರ್ವಾದ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದೂರದೃಷ್ಟಿಯಿಂದಾಗಿ ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಭರಮಸಾಗರ ಹೋಬಳಿಗೆ ರಾಜನಹಳ್ಳಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ರೂ. ೫೬೫ ಕೋಟಿಗಳನ್ನು ಮಂಜೂರು ಮಾಡಿ, ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಕಳೆದ ವರ್ಷ ಮೂರು ಸಾವಿರ ಟಿಎಂಸಿ ನೀರು ಸಮುದ್ರದ ಪಾಲಾಗಿದೆ. ಅದಕ್ಕಾಗಿ ಇಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನೀರನ್ನು ತಡೆಹಿಡಿದು, ರೈತರಿಗೆ ಅನುಕೂಲವಾಗಲು ಕೆರೆಗಳಿಗೆ ನೀರನ್ನು ತುಂಬಿಸಿ ಸದುಪಯೋಗವಾಗುವಂತೆ ಮಾಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರಮಸಾಗರ ಹೋಬಳಿ ಮತ್ತು ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಹಣ ಬಿಡುಗಡೆ ಮಾಡಿದ್ದು, ಚಿತ್ರದುರ್ಗ ಜಿಲ್ಲೆಯು ಸಮೃದ್ಧ ನೀರಾವರಿಯಾಗಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.
ಚಿತ್ರದುರ್ಗ ಜಿಲ್ಲೆಯು ನೂರು ವರ್ಷದ ಇತಿಹಾಸದಲ್ಲಿ ೭೬ ವರ್ಷ ಬರಗಾಲವನ್ನು ಅನುಭವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ರೈತರು ಜೀವನ ನಡೆಸುವುದು ಬಹಳ ಕಷ್ಟ. ಇಂತಹ ಸಂದರ್ಭದಲ್ಲೂ ಸರ್ಕಾರ ಅಗತ್ಯ ನೆರವು ನೀಡಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಡಿ.ವಿ.ಶರಣಪ್ಪ, ರಾಜನಹಳ್ಳಿ ಏತ ನೀರಾವರಿ ಯೋಜನೆಯ ಅಧಿಕಾರಿಗಳು, ಶಂಕರನಾರಾಯಣ ಕನ್ಸ್ರ್ಟಕ್ಷನ್ಸ್ ಸಿಬ್ಬಂದಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.