Sunday, August 14, 2022

Latest Posts

ಡಿಸೆಂಬರ್ ತಿಂಗಳಲ್ಲಿ ನೇರ ನೇಮಕಾತಿ ಮೂಲಕ 3300 ವೈದ್ಯರ ನೇಮಕ : ಸಚಿವ ಡಾ.ಕೆ.ಸುಧಾಕರ್

ಹೊಸ ದಿಗಂತ ವರದಿ, ಹಾವೇರಿ:

ಡಿಸೆಂಬರ್ ತಿಂಗಳಲ್ಲಿ 3300 ವೈದ್ಯರನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ ಘೋಷಿಸಿದರು.
ದೇವಗಿರಿ-ಯಲ್ಲಾಪೂರದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡದ ನಿವೇಶನದಲ್ಲಿ ಶುಕ್ರವಾರ ಆಯೋಜಿಸಲಾದ ನೂತನ ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು, ಪ್ರಸಕ್ತ 1200 ಜನರಿಗೆ ಒಬ್ಬ ವೈದ್ಯರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಂತೆ ಒಂದು ಸಾವಿರ ಜನರಿಗೆ ಒಬ್ಬ ವೈದ್ಯರಿರಬೇಕು. ಈ ಕೊರತೆ ನೀಗಿಸಲು ಬರುವ ಡಿಸೆಂಬರ್ ತಿಂಗಳಲ್ಲಿ ತಜ್ಞವೈದ್ಯರು ಸೇರಿದಂತೆ ೨೫೦೦ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 800 ಹಿರಿಯ ರೆಸಿಡೆಂಟಲ್ ವೈದ್ಯರನ್ನು ನೇಮಕಮಾಡಿಕೊಳ್ಳಲಾಗುವುದು. ಪ್ರತಿ ಜಿಲ್ಲೆಗೆ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ದೂರ ದೃಷ್ಟಿಯ ಆರೋಗ್ಯ ಸೇವೆಯನ್ನು ಕಲ್ಪಿಸಲು ಮುಂದಾಗಿದ್ದು, ಸಾಮಾನ್ಯ ಜನರಿಗೆ ಉಚಿತ ಆರೋಗ್ಯ ಸೇವೆ, ಸುಲಬ ದರದಲ್ಲಿ ಆರೋಗ್ಯ ಸೌಲಭ್ಯ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು, ವೈದ್ಯರ ದಕ್ಷತೆಯನ್ನು ಹೆಚ್ಚಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆವರೆಗೆ ಎಲ್ಲ ಹಂತದ ಆಸ್ಪತ್ರೆಗಳ ಉನ್ನತೀಕರಿಸಬೇಕು. ೨೪*೭ ಕಾಲ ಉತ್ತಮ ವೈದ್ಯಕೀಯ ಸೌಲಭ್ಯ ದೊರಬೇಕು. ಈಗ ಬದಲಾವಣೆ ಕಾಲ ಬಂದಿದೆ, ಬದಲಾಯಿಸುತ್ತೇವೆ. ಜನರಿಗೆ ಉತ್ಕೃಷ್ಟವಾದ ಸೇವೆ ನೀಡಲು ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಮುನ್ನೆಚ್ಚರಿಕೆ
ಕರೋನಾ ವೈರಾಣು ಬಗ್ಗೆ ಎಚ್ಚರದಿಂದಿರಿ. ಮರಣ ಪ್ರಮಾಣ ಇಳಿಮುಖವಾಗಿದೆ. ಆದರೆ ಕರೋನಾ ನಮ್ಮೊಂದಿಗೆ ಇಲ್ಲ. ಕರೋನಾ ಲಸಿಕೆ ಬರೋವರಿಗೆ ಮುನ್ನೆಚ್ಚರಿಕೆಯೇ ಲಸಿಕೆಯಾಗಿದೆ. ಇದೀಗ ಚಳಿಗಾಲ ಬಂದಿದೆ, ಗರಿಷ್ಠ ಎಚ್ಚರಿಕೆಯಿಂದಿರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಕೊನೆಗೆ ನೂತನ ವೈದ್ಯಕೀಯ ಕಾಲೇಜ್ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರು ಓಲೇಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಜಿ.ಪಂ.ಅಧ್ಯಕ್ಷ ಏಕನಾಥ ಬಾನುವಳ್ಳಿ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ವಿ.ಪ ಸದಸ್ಯ ಎಸ್.ವಿ.ಸಂಕನೂರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ.ಸದಸ್ಯ ವಿರುಪಾಕ್ಷಪ್ಪ ಕಡ್ಲಿ ಹಾಗೂ ತಾ.ಪಂ.ಸದಸ್ಯ ಸತೀಶ ಸಂದಿಮನಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಹಾಗೂ ಜಿ.ಪಂ ಸಿಇಓ ರಮೇಶ ದೇಸಾಯಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss