Sunday, June 26, 2022

Latest Posts

ಡಿಸೆಂಬರ್ 9ರಿಂದ ಕಟೀಲಿನ ಆರೂ ಮೇಳಗಳ ತಿರುಗಾಟ ಆರಂಭ

ಹೊಸ ದಿಗಂತ ವರದಿ ಕಟೀಲು

ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಹೊರಡುವ ಆರೂ ದಶಾವತಾರ ಮೇಳಗಳ ಈ ವರುಷದ ತಿರುಗಾಟ ತಾ.೯ರಂದು ಆರಂಭವಾಗಲಿದೆ. ವರ್ಷಂಪ್ರತಿಯಂತೆ ತಾ.೫ರಂದು ದೀಪೋತ್ಸವ ನಡೆಯಲಿದ್ದು, ಬಳಿಕ ಮೇಳಗಳ ತಿರುಗಾಟ ಆರಂಭವಾಗಲಿದೆ.

ಈ ವರುಷ ಸುಮಾರು ಮೂವತ್ತು ಮಂದಿ ಕಟೀಲಿನ ಮೇಳ ಬಿಟ್ಟಿದ್ದಾರೆ. ಅವರಲ್ಲಿ ಹನ್ನೆರಡು ಕಲಾವಿದರು, ಎಂಟು ಇತರ ಸಹಾಯಕರು ಸೇರಿದಂತೆ ೨೦ ಮಂದಿ ಹೊಸದಾದ ಪಾವಂಜೆ ಮೇಳ ಸೇರಿದ್ದು, ಮೂರನೇ ಮೇಳದಲ್ಲಿದ್ದ ಮಯ್ಯ ಭಾಗವತರು, ಬೆಳ್ಳಾರೆ ಮನೋಹರ, ಮುಖ್ಯಪ್ರಾಣ ಕಿನ್ನಿಗೋಳಿ, ರವಿಚಂದ್ರ ಚೆಂಬು, ಮೋಹನ ಶೆಟ್ಟಿಗಾರ್, ರೋಹಿತ್ ಉಚ್ಚಿಲ್, ರಂಜಿತ್ ರೈ, ಯತೀಶ್ ರೈ, ಭರತ್ ಉಳ್ಳುರು, ಸೇರಿದಂತೆ ಹತ್ತರಷ್ಟು ಮಂದಿ ವೈಯಕ್ತಿಕ, ಆರೋಗ್ಯ, ಬೇರೆ ಮೇಳ, ವಯಸ್ಸಿನ ಕಾರಣಗಳಿಗಾಗಿ ಈ ವರುಷದ ತಿರುಗಾಟ ನಿಲ್ಲಿಸಿದ್ದಾರೆ.

ಆದರೆ ಐವತ್ತರಷ್ಟು ಮಂದಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಅಡೂರು ಜಯರಾಮ ಭಾಗವತರು, ಪಡ್ರೆ ಶ್ರೀಧರ, ರಾಜೇಶ ಕಟೀಲು, ಹರಿಪ್ರಸಾದ ಇಚ್ಲಂಪಾಡಿ, ಸೀತಾರಾಮ ಶೆಟ್ಟಿಗಾರ್, ಹರೀಶ ಬಂಗೇರ ತೇವುಕಾಡು, ಸುಜನ್ ಕುಮಾರ ಅಳಿಕೆ, ರಾಘವೇಂದ್ರ ಬಳ್ಳಮಂಜ ಹೀಗೆ ಎಂಟರಿಂದ ಹತ್ತು ಮಂದಿ ಹಿಮ್ಮೇಳಕ್ಕೆ ಸೇರಿದ್ದರೆ, ಮುಮ್ಮೇಳಕ್ಕೆ ತಾರಾನಾಥ ವರ್ಕಾಡಿ, ಅಮ್ಮುಂಜೆ ಮೋಹನ, ಮೋಹನ ಮುಚ್ಚೂರು, ಸಂದೀಪ್ ದೇಲಂಪಾಡಿ, ಶ್ರೀನಿವಾಸ ಕುರಿಯಾಳ, ನಾಗರಾಜ ಇರಾ, ಶಿವರಾಮ ವಿಟ್ಲ, ಗುರುತೇಜ ಶೆಟ್ಟಿ, ಅಕ್ಷಯ ಮಂಗಲ್ಪಾಡಿ, ಸತೀಶ್ ದೈಗೋಳಿ, ಸತೀಶ್ ಬೆಟ್ಟಂಪಾಡಿ, ಹರೀಶ್ ಕುಂಬ್ಲೆ, ಕಿರಣ್ ಆಚಾರ್ಯ, ಯತೀಶ್ ಕಾರ್ಕಳ, ಅಕ್ಷಯ ರಾವ್, ಮಹೇಶ ಎಡನೀರು, ಕಮಲಾಕ್ಷ ಬೆಂಜನಪದವು, ಆನಂದ ಜೋಗಿ, ಪದ್ಮನಾಭ ತುಂಬೆ, ಶೇಖರ ಹಿರೇಬಂಡಾಡಿ, ದೀಪಕ್ ಕೋಟ್ಯಾನ್, ಶಿವಪ್ರಸಾದ ಕುರಾಯ, ಪವನ್, ಸುಚೇಂದ್ರನಾಥ, ಸಂತೋಷ್ ಸಜಿಪ, ಮಿಥುನ್ ಬೆಳ್ಳಾರೆ, ಸಂಜಯ ಹೀಗೆ ನಲವತ್ತರಷ್ಟು ಕಲಾವಿದರು, ಹತ್ತು ಮಂದಿಯಷ್ಟು ಇತರ ಸಹಾಯಕರು ಕಟೀಲು ಮೇಳದ ಈ ವರುಷದ ತಿರುಗಾಟಕ್ಕೆ ಸಿದ್ಧವಾಗಿದ್ದಾರೆ. ವೇಷಭೂಷಣ ಪೆಟ್ಟಿಗೆಗಳಲ್ಲಿ ಕಲಾವಿದರ ಹೆಸರು ಬರೆಯಿಸಲಾಗಿದೆ.
ಮೂರು ವರುಷಗಳ ಹಿಂದೆ ಮೇಳದಿಂದ ಹೊರಕ್ಕೆ ಹೋಗಿದ್ದ ಅಮ್ಮುಂಜೆ ಮೋಹನ ಈ ಸಲ ಮತ್ತೆ ಕಟೀಲು ಮೇಳಕ್ಕೆ ವಾಪಾಸಾಗಿದ್ದಾರೆ. ನಗ್ರಿ ಮಹಾಬಲ ರೈ ಎರಡು ವರುಷಗಳ ಹಿಂದೆಯೇ ಸೇರ್ಪಡೆಯಾಗಿದ್ದರು.

ವೇಷಗಳ ಉಡುಗೆ, ಆಭರಣ, ಆಯುಧಗಳಿಗೆ ಬಣ್ಣ ಬಳಿಯುವುದು ಹೀಗೆ ಮೇಳದ ಸಿದ್ಧತೆಯ ಪೇಂಟಿಂಗ್, ಮರದ ಕೆಲಸಗಳನ್ನು ಹತ್ತರಷ್ಟು ಮಂದಿ ಕಳೆದ ನಾಲ್ಕು ತಿಂಗಳಿನಿಂದ ಮಾಡುತ್ತಿದ್ದು, ಉಡುಗೆಗಳ ಕೆಲಸಕ್ಕೆ ಇಬ್ಬರು ಟೈಲರ್‌ಗಳು ವರುಷವಿಡೀ ಕಾರ್‍ಯನಿರ್ವಹಿಸುತ್ತಾರೆ.

೧೭೦ರಷ್ಟು ಮಂದಿ ವೇಷಧಾರಿಗಳು, ೫೭ ಹಿಮ್ಮೇಳ ಕಲಾವಿದರು, ಡ್ರೈವರ್, ಲೈಟಿಂಗ್ ಸೇರಿದಂತೆ ೨೪ ಮಂದಿ, ೯೦ ರಷ್ಟು ಮಂದಿ ಇತರ ಸಹಾಯಕರು ಹೀಗೆ ಒಟ್ಟು ಅಂದಾಜು ಲೆಕ್ಕಾಚಾರದಂತೆ ೩೩೦ರಿಂದ ೩೪೦ ಮಂದಿ ಕಟೀಲು ಮೇಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮೇಳದ ವೀಳ್ಯವನ್ನು ಈ ವರುಷ ಹೆಚ್ಚಿಸಲಾಗಿಲ್ಲ. ಕಳೆದ ವರುಷದಂತೆಯೇ ಖಾಯಂ ಸೇವಾದಾರರಿಗೆ ೫೫ ಸಾವಿರ ರೂ. ಮತ್ತು ದೇವರ ಕಾಣಿಕೆ ರೂ. ೫ ಸಾವಿರ ಹಾಗೂ ಇತರರಿಗೆ ೬೦ ಸಾವಿರ ರೂ. ಮತ್ತು ದೇವರ ಕಾಣಿಕೆ ರೂ. ೬ಸಾವಿರ, ದೇವೀಮಾಹಾತ್ಮ್ಯೆ ಪ್ರಸಂಗಕ್ಕೆ ಹೆಚ್ಚಿಗೆ ರೂ. ೧೫೦೦ ಮೊತ್ತವನ್ನು ಪಡೆಯಲಾಗುತ್ತದೆ. ೩೮೦ ರಿಂದ ೪೦೦ರಷ್ಟು ಖಾಯಂ ಸೇವಾದಾರರು ಕಟೀಲು ಮೇಳಗಳ ಆಟ ಆಡಿಸುತ್ತಾರೆ. ಮೇ ೨೫ಕ್ಕೆ ಪತ್ತನಾಜೆ ಸೇವೆಯಾಟ ನಡೆಯಲಿದ್ದು, ೧೬೭ದಿನಗಳ ಸೇವೆಯಾಟ ನಡೆಯಲಿದೆ. ಮೇಳ ಆರಂಭ ಹಾಗೂ ಕೊನೆಯ ದಿನದ ಸೇವೆಯಾಟ ಹೊರತು ಪಡಿಸಿ, ಆರೂ ಮೇಳಗಳಿಂದ ೯೯೦ ಸೇವೆಯಾಟಗಳು ನಡೆಯಲಿವೆ.

ಕಟೀಲು ಕ್ಷೇತ್ರದಲ್ಲಿ ಹೊಸ ಕಲಾವಿದರಿಗೆ ಪಾರಂಪರಿಕೆ ಕುಣಿತಗಳ ತರಬೇತಿಯ ಚಿಂತನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕಲಾವಿದರಿಗೆ ನಾನಾ ವಿಭಾಗಗಳ ಕಾರ್‍ಯಾಗಾರ, ತರಗತಿಗಳ ಮೂಲಕ ಪ್ರದರ್ಶನಗಳ ಗುಣಮಟ್ಟವನ್ನು ಮತ್ತಷ್ಟು ಚಂದವಾಗಿಸುವ ಪ್ರಯತ್ನ ಮುಂದುವರಿಯಲಿದೆ. ಈ ಹಿಂದೆ ದೇವೀಮಾಹಾತ್ಮ್ಯೆ ಕಾರ್‍ಯಾಗಾರವನ್ನು ಮಾಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss