Saturday, July 2, 2022

Latest Posts

ಡಿ.ಕೆ.ಶಿ-ಸಿದ್ದರಾಮಯ್ಯ ನಡುವಿನ ಶೀತಲ ಸಮರದಿಂದ ರಾಜ್ಯದಲ್ಲಿ ಬಿಜೆಪಿಗೆ ಲಾಭ: ವಿ.ಸುನಿಲ್‍ಕುಮಾರ್

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಶೀತಲ ಸಮರದಿಂದ ರಾಜ್ಯದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂದು ಸರ್ಕಾರದ ಮುಖ್ಯ ಸಚೇತಕ ವಿ.ಸುನಿಲ್‍ಕುಮಾರ್ ಹೇಳಿದರು.
ಅವರು ಶುಕ್ರವಾರ ನಗರ ಹೊರಲಯದ ನರಿಗುಡ್ಡೇನಹಳ್ಳಿಯಲ್ಲಿ ಭಾರತ್ ಗ್ಯಾಸ್ ವಿತರಕರ ಕಚೇರಿ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇವರಿಬ್ಬರು ಮೇಲ್ನೋಟಕ್ಕೆ ಸಭೆ, ಸಮಾರಂಭ, ಪ್ರಚಾರದಲ್ಲಿ ಭಾಗವಹಿಸುತ್ತಿರಬಹುದು ಆದರೆ ವೇದಿಕೆ ಇಳಿದು ಕುರ್ಚಿ ಅದಲು ಬದಲಾದ ನಂತರ ಪರೋಕ್ಷವಾಗಿ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ ಎಂದರು.
ಈಗಾಗಲೆ ಕಾಂಗ್ರೆಸ್ ಶಾಸಕರುಗಳಾದ ಜಮೀರ್ ಅಹಮದ್ ಹಾಗೂ ಸೌಮ್ಯರೆಡ್ಡಿ ನೀಡಿರುವ ಹೇಳಿಕೆಗಳು ಡಿ.ಕೆ.ಶಿವಕುಮಾರ್ ಅವರಲ್ಲಿ ಎಷ್ಟು ತಳಮಳ ಉಂಟುಮಾಡಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಉಪ ಚುನಾವಣೆ ನಂತರ ಇನ್ನಷ್ಟು ತಳಮಳ ಸೃಷ್ಟಿಯಾಗಲಿದೆ. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕೆನ್ನುವ ವಿಚಾರದಲ್ಲೇ ಕಾಂಗ್ರೆಸ್‍ನಲ್ಲಿ ದೊಡ್ಡ ಗೊಂದಲದ ಗೂಡಾಗಿ ಇನ್ನಷ್ಟು ದುರ್ಬಲತೆಯತ್ತ ಸಾಗಲಿದೆ ಎಂದು ಹೇಳಿದರು.
ಈ ಇಬ್ಬರ ನಡುವಿನ ನಾಯಕತ್ವದ ಪೈಪೆÇೀಟಿ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಶಾಸಕರು ಬಹಳ ದೊಡ್ಡ ಪ್ರಮಾಣದಲ್ಲಿ ಬಿಜೆಪಿಕಡೆ ಒಲವು ತೋರುತ್ತಿದ್ದಾರೆ ಎನ್ನುವ ಬಗ್ಗೆ ಕಾಂಗ್ರೆಸ್ ಶಾಸಕರ ವಲಯಗಳಲ್ಲೆ ಮಾತು ಕೇಳಿ ಬರುತ್ತಿದೆ ಎಂದು ಹೇಳಿದರು.
ಜನ ಬಿಜೆಪಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ವಿಫಲತೆ ಕಾಣುತ್ತಾರೆ. ಕೆಪಿಸಿಸಿ ನೂತನ ಸಾರಥಿ ಡಿ.ಕೆ.ಶಿವಕುಮಾರ್ ಕೂಡ ಪಥನದ ಹಾದಿ ಹಿಡಿಯುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಇವರಿಬ್ಬರ ಆಂತರಿಕ ಗೊಂದಲ ಕರ್ನಾಟಕದಲ್ಲಿ ಬಿಜೆಪಿಗೆ ಲಾಭ ತಂದು ಕೊಡುತ್ತದೆ. ಕಾಂಗ್ರೆಸ್ ಪಕ್ಷ ದುರ್ಬಲವಾದಷ್ಟು ರಾಜ್ಯಕ್ಕೆ ಒಳಿತಾಗುತ್ತದೆ ಎಂದರು.
ಕರೊನಾ ಮತ್ತು ನೆರೆ ಹಾವಳಿಯ ಹಿನ್ನೆಲೆಯಲ್ಲಿ ಅಭಿವೃದ್ಧಿಯಲ್ಲಿ ಕೊಂಚ ಕುಂಠಿತವಾಗಿದ್ದರೂ ಮುಂದಿನ ದಿನಗಳಲ್ಲಿ ವೇಗ ಪಡೆಯಲಿದೆ. ಉಪ ಚುನಾವಣೆಗಳಲ್ಲಿ ಎರಡು ಸ್ಥಾನಗಳನ್ನು ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ನಿಶ್ಚಿತವಾಗಿ ಹೊಸ ಬದಲಾವಣೆಯನ್ನು ಕಾಣುತ್ತೇವೆ. ಕಾಂಗ್ರೆಸ್ ನೊಳಗಿರುವ ಅಸಮಾದಾನ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಉತ್ತಮ ಆಡಳಿತ, ಕರೊನಾ ಸಂದರ್ಭದಲ್ಲೂ ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದು ಭವಿಷ್ಯ ಮತ್ತು ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಮಾತ್ರ ಪರ್ಯಾಯವೆಂದು ಜನರಿಗೆ ಅನಿಸಲು ಆರಂಭವಾಗಿದ್ದು ಈ ಎಲ್ಲಾ ಅಂಶಗಳು ಗೆಲುವಿಗೆ ಪೂರಕವಾಗುತ್ತದೆ. ಮುಂಬರುವ ಜಿಪಂ, ತಾಪಂ ಚುನಾವಣೆಗಳಲ್ಲಿ ಬಿಜೆಪಿ ಹೊಸ ಮನ್ವಂತರ ಸೃಷ್ಟಿಸುತ್ತದೆ ಎಂದರು.
ತಾವು ಮೂರು ಬಾರಿ ಶಾಸಕನಾಗಿದ್ದು ಕ್ಷೇತ್ರದ ಅಭಿವೃದ್ದಿ ಹಾಗೂ ಜನರ ವಿಶ್ವಾಸಗಳಿದ್ದೇನೆ. ಆರಂಭದಿಂದ ಪಕ್ಷದ ಚಟುವಟಿಕೆಯಲ್ಲಿ ನಿಷ್ಟಾವಂತನಾಗಿ ಕೆಲಸ ಮಾಡಿದ್ದೇನೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದು ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷ ನನ್ನನ್ನು ಗುರುತಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss