Saturday, July 2, 2022

Latest Posts

ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣ: ಕೊನೆಗೂ ಮಾಜಿ ಮೇಯರ್ ಸಂಪತ್​ ರಾಜ್​ ಅರೆಸ್ಟ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯದ ರಾಜಧಾನಿ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ರನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೊರೋನಾ ಪಾಸಿಟಿವ್ ಎಂದು ಹೇಳಿ ಆಸ್ಪತ್ರೆ ಸೇರಿದ್ದ ಸಂಪತ್ ರಾಜ್ ಅಕ್ಟೋಬರ್ 23ರಂದು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಹಳ ದಿನಗಳಿಂದ ತಲೆ ಮರೆಸಿಕೊಂಡಿದ್ದರು. ತೀವ್ರ ಹುಡುಕಾಟದ ನಂತರ ಸೋಮವಾರ ರಾತ್ರಿ ಸಿಸಿಬಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಸೇರಿದಂತೆ ಹೊರ ರಾಜ್ಯದಲ್ಲಿಯೂ ಸಂಪತ್ ರಾಜ್ ಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಸಿಸಿಬಿ ಬಲೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಮಂಗಳವಾರವಷ್ಟೇ ಸಂಪತ್ ರಾಜ್ ಆಪ್ತ ರಿಯಾಜುದ್ದೀನ್ ರನ್ನು ಸಿಸಿಬಿ ಪೊಲೀಸರು ಬಂಧಿಸಿ ಆತ ನೀಡಿದ ಸುಳಿವಿನ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರ ಬಲೆಗೆ ಸಂಪತ್ ರಾಜ್ ಬಿದ್ದಿದ್ದು, ಅಂತಿಮವಾಗಿ ಅವರನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿರುವ ಸಿಸಿಬಿ ಪೊಲೀಸರು, ಅವರನ್ನು ಇಂದು ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ 50 ಪುಟಗಳ ಮಧ್ಯಂತರ ದೋಷಾರೋಪ ಪಟ್ಟಿಯನ್ನು ಸಿಸಿಬಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss