ಹೊಸ ದಿಗಂತ ವರದಿ, ಮಂಗಳೂರು:
ಸೆ.16ರಿಂದ ಅ.19ರವರೆಗೆ ನಡೆದ ಮಂಗಳೂರು ವಿವಿಯ 2019-20ನೇ ಸಾಲಿನ ಅಂತಿಮ ವರ್ಷ ಮತ್ತು ಸೆಮಿಸ್ಟರ್ನ ಸ್ನಾತಕ, ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಡಿ.21ರಿಂದ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.
ಮಂಗಳೂರಿನ ವಿವಿ ಕಾಲೇಜು, ಉಡುಪಿಯ ಎಂಜಿಎಂ ಕಾಲೇಜು, ಮಡಿಕೇರಿಯ ಎಫ್ಎಂಕೆಎಂಸಿ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಗುವುದು. ಶ್ರೀಲಂಕಾದ ವಿದ್ಯಾರ್ಥಿಗಳ ಸಹಿತ ಒಟ್ಟು 5 ಸಾವಿರ ಮಂದಿ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ. ಆಯಾ ಕಾಲೇಜಿನ ಪ್ರಾಂಶುಪಾಲರ ಮೂಲಕ ಪತ್ರ ನೀಡಿ ಪರೀಕ್ಷೆಗೆ ಹಾಜರಾಗಬಹುದು. ಹಳೆಯ ನೋಂದಣಿ ಮೂಲಕವೇ ಪರೀಕ್ಷೆ ಬರೆಯಬಹುದು. ಇದಕ್ಕಾಗಿ ಪ್ರತ್ಯೇಕ ಶುಲ್ಕ ಪಾವತಿಸಬೇಕಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ನಡೆದ ಪದವಿ ಪರೀಕ್ಷೆಗಳ ಮೌಲ್ಯಮಾಪನ ಶೇ.80ರಷ್ಟು ಮುಕ್ತಾಯಗೊಂಡಿದೆ. ಬಿಬಿಎ,ಬಿಸಿಎ, ಬಿಎಚ್ಎಸ್ ಕೋರ್ಸ್ಗಳ ಫಲಿತಾಂಶವನ್ನು ನ.15ರಂದು, ಬಿ.ಎ., ಬಿಎಸ್ಸಿ ಫಲಿತಾಂಶವನ್ನು ನ.16ರಂದು ಬಿಕಾಂ ನ.17ರಂದು, ಬಿಬಿಎಂ, ಬಿಎಸ್ಡಬ್ಲ್ಯೂ ಫಲಿತಾಂಶವನ್ನು ನ.19ರಂದು ವಿವಿಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಬಿಎಸ್ಸಿ (ಎಫ್ಎನ್ಡಿ), ಬಿಎಚ್ಎಂ, ಬಿಎಸ್ಪಿ (ಎಫ್ಡಿ/ಐಡಿ), ಬಿಎಎಸ್ಎಲ್ಪಿ, ಬಿಎ (ಎಚ್ಆರ್ಡಿ) ಕೋರ್ಸ್ಗಳ ಫಲಿತಾಂಶವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದರು.
ಮರುಮೌಲ್ಯಮಾಪನ/ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು ಡಿ.2ರ ಒಳಗೆ ಫಲಿತಾಂಶದ ವೆಬ್ಸೈಟ್ (ಪ್ರಾಂಶುಪಾಲರಿಂದ ದೃಢೀಕೃತ) ಪ್ರತಿಯೊಂದಿಗೆ ಕಾಲೇಜು ಮೂಲಕ ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ವೆಬ್ಸೈಟ್ನಲ್ಲಿ ಪ್ರಕಟವಾದ ಫಲಿತಾಂಶದ ಪ್ರತಿಯನ್ನು ಪ್ರಾಂಶುಪಾಲರಿಂದ ದೃಢೀಕರಿಸಿ ಅರ್ಜಿ ಸಲ್ಲಿಸಬಹುದು ಎಂದು ಡಾ. ಧರ್ಮ ತಿಳಿಸಿದರು.