Monday, August 15, 2022

Latest Posts

ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಎಚ್.ಡಿ.ಕೆ: ತಂದೆಗೆ ನಿಖಿಲ್ ಕುಮಾರಸ್ವಾಮಿ ಸಾಥ್

ಹೊಸದಿಗಂತ ವರದಿ,ರಾಮನಗರ:

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಡ್ಯಾಮೇಜ್ ಕಂಟ್ರೋಲ್ ಮಾಡುವ ದಿಕ್ಕಿನಲ್ಲಿ ದಳಪತಿ ಎಚ್.ಡಿ.ಕುಮಾರಸ್ವಾಮಿಯವರು ನಿರತರಾಗಿದ್ದು, ಕಳೆದೆರಡು ದಿನಗಳಿಂದ ಬಿಡದಿಯ ತೋಟದ ಮನೆಯಲ್ಲಿ ತಾಲ್ಲೂಕು ಮಟ್ಟದ ಮುಖಂಡರೊಡನೆ ಸಮಾಲೋಚನೆ ನಡೆಸಿದ್ದಾರೆ.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಚನ್ನಪಟ್ಟಣ ತಾಲ್ಲೂಕು ಹೊರತುಪಡಿಸಿದರೆ, ಜಿಲ್ಲೆಯ ಇನ್ನುಳಿದ ಮೂರು ತಾಲ್ಲೂಕು ಗಳಲ್ಲಿಯೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ನಿರೀಕ್ಷಿತ ಸಂಖ್ಯೆಯಲ್ಲಿ ಅಯ್ಕೆಯಾಗದ ಕಾರಣ, ಜೆಡಿಎಸ್ ಭದ್ರಕೋಟೆ ಎನಿಸಿದ್ದ
ಜಿಲ್ಲೆಯಲ್ಲಿ ಪಕ್ಷ ದಿನೇ ದಿನೆ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡoತಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಸಜ್ಜಾಗುವುದರ ಜೊತೆಗೆ, ಗ್ರಾಮ ಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷ ಅಯ್ಕೆ ನಿಟ್ಟಿನಲ್ಲಿಯೂ ಕಾರ್ಯೋನ್ಮುಖರಾಗಿದ್ದು ಪ್ರಮುಖ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಚರ್ಚೆ ನಡಿಸುತ್ತಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಒಂದು ರೀತಿಯಲ್ಲಿ ಸಂಚಲನ ಮೂಡಿಸಿದೆ.

ತಂದೆಯ ಜೊತೆಗೆ ಟೊಂಕಕಟ್ಟಿ ನಿಂತಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಪಕ್ಷ ಸಂಘಟನೆಗೆ ಮುಂದಾಗಿರವುದು ಕೂಡ ಕಾರ್ಯಕರ್ತರಿಗೆ ಮುದ ನೀಡಿದೆ. ಜಿಲ್ಲೆಯ ನಾಲ್ಕೂ ತಾಲ್ಲೂಕುಗಳ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ತಮ್ಮ ಗ್ರಾಮಗಳ ಸ್ಥಿತಿಗತಿಯನ್ನು ವಿವರಿಸುವುದರ ಜೊತೆಗೆ, ಸಂಭಾವ್ಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ದಿಕ್ಕಿನಲ್ಲಿ ಕೈಗೊಳ್ಳಬೇಕಾದ ತಂತ್ರಗಳ ಬಗ್ಗೆಯೂ ಚರ್ಚೆ ಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಕೈ ತಪ್ಪಿದ ಹಲವು ಅಧಿಕಾರ: ಕಳೆದ ಹತ್ತಾರು ವರ್ಷಗಳಿಂದ ರಾಮನಗರ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದು ಜನ ಜನಿತವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಈ ಮಾತನ್ನು ಹೇಳುವಂತಿಲ್ಲ. ಏಕೆಂದರೆ ಜಿಲ್ಲಾ ಕೇಂದ್ರವಾದ ರಾಮನಗರ ತಾಲ್ಲೂಕಿನಲ್ಲಿ ಜೆಡಿಎಸ್ ಎಲ್ಲಾ ಹಂತ ದಲ್ಲಿಯೂ ಕ್ಷೀಣಿಸುತ್ತಿದ್ದು, ಅಧಿಕಾರ ಕೈಯಲ್ಲಿದ್ದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಸ್ಥಾನ, ಎಪಿಎಂಸಿ ಅಧ್ಯಕ್ಷ ಸ್ಥಾನ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಸೇರಿದಂತೆ ಇತ್ತೀಚಿಗೆ ನಡೆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನವೂ ಕೈ ತಪ್ಪಿದೆ.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಎ.ಇಕ್ಬಾಲ್ ಹುಸೇನ್ ಅವರ ಚಾಣಾಕ್ಷತನ ಹಾಗೂ ಪಕ್ಷ ಸಂಘಟನೆಯ ರೀತಿ ತಾಲ್ಲೂಕಿನಲ್ಲಿ ಬಿರುಸಾಗಿದ್ದು, ಜೆಡಿಎಸ್ ಹಿಡಿತದಲ್ಲಿದ್ದ ಸ್ಥಳೀಯ ಸಂಸ್ಥೆಗಳಲ್ಲಿ ಹಂತ ಹಂತವಾಗಿ ಕಾಂಗ್ರೆಸ್ ಲಗ್ಗೆ ಇಡುತ್ತಿದೆ. ಈ ನಿಟ್ಟಿನಲ್ಲಿ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ದಳಪತಿ ಕುಮಾರಸ್ವಾಮಿಯವರು ಮುಖಂಡರ ಜೊತೆ ತಂಡ-ತoಡವಾಗಿ ಚರ್ಚೆ ಆರಂಭಿಸಿದ್ದಾರೆ.

ಈ ವರ್ಷದ ಆರಂಭದಿoದಲೇ ಸಂಘಟನೆ ದೃಷ್ಟಿಯಿಂದ ಜೆಡಿಎಸ್ ಪಕ್ಷವು ಹೊಸ ಆಯಾಮ ಪಡೆದುಕೊಳ್ಳಲಿದ್ದು, ರಾಜ್ಯವ್ಯಾಪಿ ಪ್ರವಾಸ ಮಾಡಲಿದ್ದೇನೆ. 2023ರ ವಿಧಾನಸಭೆ ಚುನಾವಣೆ ಹೊತ್ತಿಗೆ ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ಸಂಘಟಿಸಿ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಅವಿರತವಾಗಿ ಶ್ರಮಿಸಲಾಗುವುದು.ಈ ನಿಟ್ಟಿನಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಯಾವುದೇ ಊಹ ಪೋಹಗಳಿಗೆ ಕಿಡಿ ಕೊಡಬಾರದು.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss