Thursday, June 30, 2022

Latest Posts

ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ೩೨ ಮಂದಿ ರಾಜಕಾರಣಗಳ ಪಟ್ಟಿಯನ್ನು ಐಜಿ, ಡಿಐಜಿಗೆ ಸಲ್ಲಿಸುತ್ತೇನೆ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಮೈಸೂರು: ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ೩೨ ಮಂದಿ ರಾಜಕಾರಣಿಗಳನ್ನು ಪಟ್ಟಿ ಮಾಡಿದ್ದೇನೆ, ಅದನ್ನು ಕಾನೂನು ಕ್ರಮಕ್ಕಾಗಿ ಐಜಿ, ಡಿಐಜಿಯವರಿಗೆ ಸಲ್ಲಿಸುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

ಗುರುವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಕ್ಯಾಸಿನೋ, ಬಾರ್, ಹುಕ್ಕಾ ಬಾರ್‌ಗಳ ಮಾಲೀಕರು ರಾಜಕಾರಣಿಗಳು. ಬೆಂಗಳೂರಿನ ಕಾರ್ಪೋಟರ್ ಗಳು ಇದ್ದಾರೆ. ನನ್ನ ಬಳಿ ಆ ೩೨ ರಾಜಕಾರಣಿಗಳ ಪಟ್ಟಿ ಇದೆ. ಅದನ್ನು ಗೃಹ ಮಂತ್ರಿ, ಡಿಜಿಗೆ ಕಳುಹಿಸುತ್ತೇನೆ ಎಂದು ಹೇಳಿದರು.

ಬೆಂಗಳೂರಿನ ಶಾಸಕ ಹ್ಯಾರೀಸ್ ಕ್ಷೇತ್ರದಲ್ಲಿ ಅತಿ ಹೆಚ್ಚಾಗಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಹ್ಯಾರೀಸ್ ಮಗ ಈ ದಂಧೆಯಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ ಮೇಲೆ ಪೊಲೀಸರು ಆತನಿಗೆ ವಿಚಾರಣೆಗೆ ಬರಲು ನೋಟಿಸ್ ನೀಡಿದ್ದಾರೆ. ಆದರೆ ಹ್ಯಾರೀಸ್ ಮಗ ಮಹಮ್ಮದ್ ನಲಪಾಡ್, ಎಲ್ಲೂ ಕೂಡ ತಮ್ಮ ಹೆಸರನ್ನು ಹಾಕದಂತೆ, ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಈತ ಪ್ರಾಮಾಣಿಕನಾಗಿದ್ದರೆ, ದಂಧೆಯಲ್ಲಿ ಭಾಗಿಯಾಗದಿದ್ದರೆ, ಯಾಕೇ ಹೆದರಬೇಕಾಗಿತ್ತು, ನ್ಯಾಯಾಲಯದ ಮೊರೆ ಹೋಗಬೇಕಿತ್ತು ಎಂದರು.
ಲವ್ ಜಿಹಾದಿ ಮಾದರಿಯಲ್ಲಿಯೇ ಡ್ರಗ್ಸ್ ಜಿಹಾದಿ ನಡೆಯುತ್ತಿದೆ. ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ. ಪಂಜಾಬ್, ಗುಜರಾತ್, ಗೋವಾ, ಬಾಂಬೆ ಮೂಲಕ ಡ್ರಗ್ಸ್ ದೇಶಕ್ಕೆ ಪ್ರವೇಶಿಸುತ್ತಿದೆ. ಈ ದಂಧೆಯಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದಾರೆ.

ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಸಾವಿರಾರು ಕೋಟಿ ದಂಧೆ ಮಾಡುತ್ತಿದ್ದಾರೆ. ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರ್ತಾರೆ. ಬಳಿಕ ಇದೇ ರೀತಿ ಡ್ರಗ್ಸ್ ದಂಧೆ ಮಾಡ್ತಾರೆ ಎಂದು ಆರೋಪಿಸಿದರು.

ಎಲ್ಲಾ ಪಕ್ಷ ಕೆಲವು ರಾಜಕಾರಣಿಗಳು, ಅವರ ಮಕ್ಕಳು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಹೊಂದಾಣಿಕೆ ರಾಜಕಾರಣದ ಮೂಲಕ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಗಮನ ಸೆಳೆದಿದ್ದ ನನ್ನನ್ನು ಟಾರ್ಗೆಟ್ ಮಾಡಿದರು. ಆಗಲೇ ಇದನ್ನು ಮಟ್ಟ ಹಾಕಿದ್ದರೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದರು.

ದೆಹಲಿ ಪೊಲೀಸರು ಬೆಂಗಳೂರಿಗೆ ಬಂದು ಡ್ರಗ್ಸ್ ದಂಧೆಯಲ್ಲಿ ಭಾಗವಹಿಸಿದ್ದವರ ಮನೆ ಮೇಲೆ ಬಂದು ದಾಳಿ ಮಾಡುವವರೆಗೂ ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಗುಪ್ತಚರ ಇಲಾಖೆಯವರು ಕತ್ತೆ ಕಾಯುತ್ತಿದ್ರಾ..? ಎಂದು ಕಿಡಿಕಾರಿದರು.

ಮೈಸೂರಿನ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲೂ ಡ್ರಗ್ಸ್ ಸೇವನೆ, ಮಾರಾಟದ ದಂಧೆ ನಡೆಯುತ್ತಿದೆ. . ಶಾಲಾ, ಕಾಲೇಜುಗಳ ಆವರಣದಲ್ಲಿ ಡ್ರಗ್ ಸಿಗುತ್ತೆ. ಇದು ಪೋಷಕರು, ಪಾಲಕರು, ಶಿಕ್ಷಕರಿಗೆ ಗೊತ್ತಿದೆ. ಆದರೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಈಗಲೂ ಹಾಸ್ಟೆಲ್‌ಗಳ ಮೇಲೆ ದಾಳಿ ಮಾಡಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೇನೆಯ ರಾಜ್ಯ ಕಾರ್ಯದರ್ಶಿ ಹರೀಶ್, ಜಿಲ್ಲಾ ಮುಖಂಡರಾದ ಮಲ್ಲಪ್ಪ, ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss