Saturday, July 2, 2022

Latest Posts

ಡ್ರಗ್ಸ್ ದಂಧೆ: ಬಿನೀಶ್ ಕೊಡಿಯೇರಿ ಮತ್ತೆ 5 ದಿನಗಳ ಕಾಲ ಇಡಿ ವಶಕ್ಕೆ

ಮಂಗಳೂರು: ಡ್ರಗ್ಸ್ ಜಾಲದಲ್ಲಿ ಬಂಧಿತನಾಗಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯೇರಿಯನ್ನು ಮತ್ತೆ 5 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಇಡಿ ಅಧಿಕಾರಿಗಳು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಜಾರಿ ನಿರ್ದೇಶನಾಲಯ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಇಡಿ ಪರ ವಾದಿಸಿದ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್, ಆರೋಪಿ ಬಿನೀಶ್ ಕೊಡಿಯೇರಿ ಅಕ್ರಮದಲ್ಲಿ ಭಾಗಿಯಾಗಿರುವ ಕುರಿತು ಮತ್ತಷ್ಟು ತನಿಖೆ ನಡೆಸುವ ಅಗತ್ಯವಿದೆ. ಆದರೆ ಆರೋಪಿ ಅನಾರೋಗ್ಯದ ಕಾರಣವೊಡ್ಡಿ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ. ಹೀಗಾಗಿ ಮತ್ತಷ್ಟು ದಿನಗಳ ಕಾಲ ಇಡಿ ವಶಕ್ಕೆ ನೀಡಬೇಕು ಎಂದು ಕೋರಿದರು.
ಅಲ್ಲದೆ ಆರೋಪಿ ಬಿನೀಶ್ ಕೊಡಿಯೇರಿ ವಿರುದ್ಧ ಕೇರಳದಲ್ಲೇ 10ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ದುಬೈನಲ್ಲಿ ಸಹ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. 3.5 ಕೋಟಿ ರೂ. ಹಣವನ್ನು ಹವಾಲ ಮೂಲಕ ಸಾಗಿಸಿರುವ ಮಾಹಿತಿ ಇದೆ. ಬಿನೀಶ್ ತನ್ನೊಂದಿಗೆ ಮಾದಕ ವಸ್ತು ಸೇವಿಸಿರುವ ಕುರಿತು ಡ್ರಗ್ಸ್ ಜಾಲದ ಪ್ರಮುಖ ಆರೋಪಿ ಅನೂಪ್ ಹೇಳಿಕೆ ನೀಡಿದ್ದಾನೆ.
ಹೀಗಾಗಿ ಮತ್ತಷ್ಟು ವಿಚಾರಣೆ ನಡೆಸುವ ಅಗತ್ಯವಿದೆ. ವಶಕ್ಕೆ ನೀಡಬೇಕು ಎಂದು ಪ್ರಸನ್ನ ಕುಮಾರ್ ಕೋರಿದರು. ಇದಕ್ಕೆ ಆರೋಪಿ ಪರ ವಾದಿಸಿದ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಆರೋಪಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂಬ ಇಡಿ ಪರ ವಕೀಲರ ವಾದ ಪುರಸ್ಕರಿಸಿದ ನ್ಯಾಯಾಲಯ ಮತ್ತೆ 5 ದಿನಗಳ ಕಾಲ ನವೆಂಬರ್ 7ರವರೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಶಕ್ಕೆ ನೀಡಿ ಆದೇಶಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss