ಧಾರವಾಡ: ಡ್ರಗ್ಸ್ ಪ್ರಕರಣದಲ್ಲಿ ಇಬ್ಬರು ನಟಿಯರು ಮಾತ್ರ ಸಿಕ್ಕಿ ಹಾಕಿಕೊಂಡಿದ್ದಾರೆ. ಅದರಲ್ಲಿ ರಾಜಕಾರಣಿಗಳು ಅವರ ಮಕ್ಕಳೂ ಭಾಗಿಯಾಗಿದ ಬಗ್ಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಶಂಕೆ ವ್ಯಕ್ತಪಡಿಸಿದರು.
ಗುರುವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡ್ರಗ್ಸ್ ಪಿಡುಗಿಗೆ ಯುವ ಜನ ಅಂಟಿಕೊಂಡಿದೆ. ಇದನ್ನು ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಇದು ಮೊದಲಿಂದ ನಡೆದುಕೊಂಡು ಬಂದ ವ್ಯವಹಾರ. ಇದರ ಮೂಲ ಪತ್ತೆ ಮಾಡಬೇಕು. ಇದರ ಬಗ್ಗೆ ಸಾಕಷ್ಟು ವಿರೋಧಿಸಿದ್ದಾಗಿ ತಿಳಿಸಿದರು.
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ನಲ್ಲಿ ಹಿರಿಯರನ್ನು ಕಡೆಗಣಿಸಿಲ್ಲ. ಕರ್ನಾಟಕದ ಹಿರಿಯ ರಾಜಕಾರಣಿಗಳಿಗೆ ಅವರು ಮನ್ನಣೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ದಿನೇಶ ಗುಂಡೂರಾವ್ ಸೇರಿದಂತೆ ಇತರರಿಗೆ ಪಕ್ಷದಲ್ಲಿ ಸೋನಿಯಾ ಗಾಂಧಿ ಅವರು ಉನ್ನತ ಸ್ಥಾನ ನೀಡಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪಕ್ಷ ಸಂಘಟನೆಗೆ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಸಲಹೆಗಳನ್ನು ಅವರು ಬಳಕೆ ಮಾಡಿಕೊಳ್ಳಲಿದ್ದಾರೆ. ಪಕ್ಷದಲ್ಲಿ ಯಾವ ಹಿರಿಯ ನಾಯಕರನ್ನೂ ಕಡೆಗಣಿಸಿಲ್ಲ ಎಂದರು.
ಕೊರೋನಾ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರ ನಡೆದಿವೆ. ಆ ವಿಷಯವನ್ನು ಜನರಿಂದ ಮರೆಮಾಚುವುದಕ್ಕಾಗಿ ಈಗ ಡ್ರಗ್ಸ್ ಪ್ರಕರಣದ ಪ್ರಚಾರ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ ಎಂದು ಹೇಳಿದರು.
ರೈತರು ಸಂಕಷ್ಟದಲ್ಲಿದ್ದಾರೆ. ಹಸಿರು ಶಾಲು ಹಾಕಿ ಗದ್ದುಗೆಗೆ ಏರಿದ ಯಡಿಯೂರಪ್ಪ ರೈತರನ್ನು ಈಗ ಮರೆತಿದ್ದಾರೆ. ಸರ್ಕಾರ ತಕ್ಷಣ ಕೇಂದ್ರದಿಂದ ಹೆಚ್ಚಿನ ಹಣಕಾಸಿನ ನೆರವು ತಂದು ರಾಜ್ಯದ ಅಭಿವೃದ್ಧಿ ಹಾಗೂ ರೈತರ ಅಭಿವೃದ್ಧಿ ಕಡೆಗೆ ಗಮನಹರಿಸಬೇಕೆಂದು ಆಗ್ರಹಿಸಿದರು.